ನನ್ನ ತಂದ
- Hashtag Kalakar
- Dec 10, 2025
- 1 min read
By Padma Shenoy
ಹಗಲೆಲ್ಲಾ ಬೆವರಿಳಿಸಿ ದುಡಿದು ನೀ ಬೆಂದೆ
ಇರುಳಲ್ಲಿ ಬಂದಿತೋ ಇಲ್ಲವೋ ನಿನ್ನ ಕಣ್ಣಿಗೆ ನಿದ್ದೆ
ನಮ್ಮ ಹೊಟ್ಟೆ ತುಂಬಿದ ಮೇಲಷ್ಟೇ ತುತ್ತು ನೀ ತಿಂದೆ
ಅಡಗಿಸಿದೆ ಎಲ್ಲಾ ಚಿಂತೆಯ, ನಿನ್ನ ನಗುವಿನ ಹಿಂದೆ
ಕಷ್ಟಗಳು ಎಷ್ಟೇ ಬಂದರೂ ನಮ್ಮ ಮುಂದೆ
ಭರವಸೆಯ ಬೆಳಕಾಗಿ, ನಮ್ಮೆದುರು ನೀ ನಿಂದೆ
ಸದಾ ಬೆನ್ನು ತಟ್ಟಲು, ಇದ್ದೆ ನೀ ನಮ್ಮ ಹಿಂದೆ
ಮನದಲ್ಲಿ ಯೋಚನೆ, ನಿನಗೆ ನಮ್ಮದೊಂದೆ
ಮನೆಗೆ ಬಂದೊಡನೆ ನಮ್ಮೊಂದಿಗೆ ಆಟವಾಡುತಿದ್ದೆ
ನಿನಗಾದ ಆಯಾಸವ ನೀನಾಗ ಮರೆಯುತಿದ್ದೆ
ಹೆಗಲ ಮೇಲೆ ಕುಳ್ಳಿರಿಸಿ ಊರ ತೇರಿಗೆ ಕರೆದೊಯ್ದೆ
ಕೇಳಿದ ಆಟಿಕೆಯ ಕ್ರಯ ನೋಡದೆ ನಮಗೆ ಕೊಡಿಸಿದೆ
ಅತ್ತಾಗ ನಾವು ಮನದಿ ನೀ ನೊಂದೆ
ನಮಗೆ ಹಬ್ಬಕ್ಕೆ ಹೊಸ ಬಟ್ಟೆಯ ತಂದೆ
ನಿನಗಿಲ್ಲವೇ ಎಂದಾಗ ನನಗೇಕೆ ಎಂದೆ
ನಾಕ್ಕಾಗ ನೀ ಸುಖ ಸಾಗರದಿ ಮಿಂದೆ
ತಪ್ಪು ಮಾಡಿದಾಗ ನೀ ಕೋಪದಿ ಗದರಿದೆ
ನಿನ್ನ ಕೋಪದ ಹಿಂದಿನ ಕಾಳಜಿ ನಾ ತಿಳಿಯದಾದೇ
ಪ್ರೀತಿಯ ಜೊತೆ ಶಿಸ್ತು ಬೆರೆಸಿ ನೀ ನಮಗುಣಿಸಿದೆ
ನೀ ಕಲಿಸಿದ ಜೀವನ ಪಾಠವ ನಾ ಮರೆಯದಾದೆ
ಸಾಹುಕಾರನಲ್ಲದಿದ್ದರೂ ಹೃದಯ ಶ್ರೀಮಂತಿಕೆ ಮೆರೆದೆ
ನಿನ್ನೆದೆಯ ಗೂಡಲ್ಲಿ ಕೂತ ಗುಬ್ಬಚ್ಚಿ ನಾನಾದೆ
ನಿನ್ನ ಬಗ್ಗೆ ಹೇಳಲು ಪದಗಳೇ ಸಾಲದೇ
ಎಂದೆಂದು ನಗುತಿರು ಓ ನನ್ನ ತಂದೆ
By Padma Shenoy

Comments