" ಅದಕೆ ಅವಳು ಭೂಮಿ "
Updated: Sep 20, 2022
By Shilpa Honnakote
ಅವಳು ಬದಲಾಗಿಲ್ಲ
ಬದಲಾಗಿರುವುದು ನೀನು ಮಾತ್ರ
ಬದಲಾಯಿಸಲು ನೀನೆಷ್ಟೋ ಪ್ರಯತ್ನಿಸಿದೆ
ಅವಳು ಬದಲಾಗಲಿಲ್ಲ
ಗರ್ಭಕೆ ಇಳಿಯೋ ಮಳೆಗೆ
ಹೊಸ ಚಿಗುರು ಕುಡಿಯೊಡೆಸಿ
ಅವಳು ಬದಲಾಗದೆ ನಕ್ಕಳು
ಉರಿಬಿಸಿಲಿಗೆ ತಂಗಾಳಿ ಎಲ್ಲಿಂದಲೋ ಹುಡುಕಿದ ಅವಳು
ಬದಲಾವಣೆ ಏನೆಂದು ಕೇಳಲಿಲ್ಲ
ನೊರೆಯಂತೆ ಮಂಜು ಮುಸು ಮುಸುಕಿ ಕಣ್ಣು ಕಟ್ಟಿದರೂ
ಕಾದು ಹೊತ್ತು ನೆತ್ತಿಗೆ ಬಂದಾಗ
ಬದಲಾಗಲ್ಲ ನಾನು ಎಂದು
ಬೆಚ್ಚನೇ ಇಬ್ಬನಿ ತೊರೆದಳು
ಅವಳು ಬದಲಾಗಲಿಲ್ಲ
ಬದಲಾದ ಕಾಲಕೆ ತನ್ನಂತೆ ನಡೆದಳು
ನಿನ್ನ ಬದಲಾವಣೆಯ ಆಸೆಗೆ ಮಾತ್ರ ಒಮ್ಮೊಮ್ಮೆ ಮೈ ಕೊಡವಿ ನಿಂತರೆ ಅವಳು
ಉಸಿರೆತ್ತಲಾರೆ ಬದಲಾವಣೆ ಹೆಸರಲಿ
ನೀನಾರು ಅವಳ ಎದುರು
ಅಣುವಿನ ಕ್ಷಣಕೂ ಅವಳು ನಿತ್ಯ ನಿರಂತರ
-: ಶಿಲ್ಪ ಹೊನ್ನಕೋಟೆ:-
By Shilpa Honnakote

Comments