top of page

ರಾಗ ರಂಜಿನಿ - By Bindu u

Aug 21
6 min read

Written By: Bindu u

Category: Short story

Competition: Poetry and Creative Writing Competition 2026

In the evocative short story "ರಾಗ ರಂಜಿನಿ" by Bindu u, readers are invited into a world of love, resilience, and humility. As part of the Poetry and Creative Writing Competition 2026 hosted by Hashtag Kalakar, this story delves deeply into the human experience, capturing the nuances of familial expectations and personal growth. Bindu u's narrative offers a poignant exploration of these themes, reflecting the spirit of the competition and its celebration of diverse voices in contemporary literature.

About the Work

"ರಾಗ ರಂಜಿನಿ" is a beautifully woven tale that captures the struggles and triumphs of its protagonist, Anuraag. Through vivid imagery and emotional depth, Bindu u explores themes of love and perseverance amidst adversity. The narrative unfolds with a delicate balance of hope and despair, ultimately leading to a heartwarming conclusion. The story’s rich cultural context and the protagonist's journey toward self-discovery resonate deeply, leaving readers with a lasting impression.

ರಾಗ ರಂಜಿನಿ

Original Submission by Bindu u

ರಾಗ ರಂಜಿನಿ

ಬೆಳಿಗ್ಗೆ ಇಂಟರ್ವ್ಯೂಗೆ ಹೊರಡಲು ರೆಡಿಯಾದ ಅನುರಾಗ್ ತಿಂಡಿ ತಿನ್ನಲೆಂದು ಅಡಿಗೆ ಮನೆಗೆ ಬಂದ. ನೋಡಿದರೆ ಪಾತ್ರೆಗಳೆಲ್ಲ ಖಾಲಿ. ಪುಟ್ಟ ಪಾತ್ರೆಯಲ್ಲೊಂದಿಷ್ಟು ಚಟ್ನಿ ಬಿಟ್ಟರೆ ಇನ್ನೇನೂ ಇರಲಿಲ್ಲ.

" ಸಾರಿ ಕಣೋ ಅನುರಾಗ್, ಇವತ್ತು ದೋಸೆ ಹಿಟ್ಟು ಸ್ವಲ್ಪವೇ ಸ್ವಲ್ಪ ಇತ್ತು. ಮಾಡಿದ ದೋಸೆಯೆಲ್ಲ ಖಾಲಿ ಆಗೋಯ್ತು. ಇವತ್ತೊಂದು ದಿನ‌ ಹೊರಗೆಲ್ಲಾದರು ತಿಂಡಿ ಮಾಡು. " ಎಂದ ಅತ್ತಿಗೆ ಸಹನಾಳ ಮಾತಿಗೆ ' ಹೂಂ ' ಎಂದಷ್ಟೇ ಉತ್ತರಿಸಿ ತಲೆಯಾಡಿಸಿದ ಅನುರಾಗ್.

" ನಿನ್ನ‌ ಹತ್ತಿರ ಎಕ್ಸ್‌ಟ್ರಾ ಕೀ ಇದೆ ಅಲ್ವ. ಇವತ್ತು ನಾನು ನಿಮ್ಮ ಅಣ್ಣ ಮನೆಗೆ ಬರೋದು ಸ್ವಲ್ಪ ತಡವಾಗುತ್ತೆ " ಎಂದು ಹೇಳಿದ ಸಹನಾ ಆಫೀಸಿಗೆ ಹೊರಟಳು.

ಅನುರಾಗ್ ಎರಡು ಗ್ಲಾಸ್ ನೀರು ಕುಡಿದ. ಹೊಟ್ಟೆ ಬೇರೆ ಹಸಿವಿನಿಂದ‌ ಚುರ್ ಎನ್ನುತ್ತಿತ್ತು. ವಿಷಾದದ ನಗುವೊಂದನ್ನು ಬೀರಿ, ಬಾಗಿಲಿಗೆ ಬೀಗ ಹಾಕಿ ಮನೆಯಿಂದ ಹೊರ ಬಿದ್ದ. ಜೇಬಲ್ಲಿ ಕೈ ಹಾಕಿ ನೋಡಿದರೆ ಇದ್ದದ್ದೇ ಐವತ್ತು ರೂಪಾಯಿ. ಇದರಿಂದ‌ ಏನಾದರೂ ಕೊಂಡು ತಿಂದರೆ‌ ಬಸ್ ಚಾರ್ಜಿಗೇನು ಮಾಡುವುದು. ಅಣ್ಣನ ಹತ್ತಿರ ಹತ್ತು ಸಲ ಕೇಳಿದರೆ ಅವನು ಹಣ ಬಿಚ್ಚುವುದೇ ಒಂದೋ, ಎರಡೋ ಸಲ. ಅದೂ, ಇಷ್ಟು ಕೊಡುವುದೇ ಹೆಚ್ಚು ಎನ್ನುವ ಧೋರಣೆ ಮುಖದಲ್ಲಿ ಎದ್ದು ಕಾಣಿಸುತ್ತದೆ. ಇವತ್ತಿನ ಇಂಟರ್ವ್ಯೂವಾದರೂ ಪಾಸಾದರೆ ಸಾಕಪ್ಪ ಎಂದುಕೊಳ್ಳುತ್ತ, ಬಸ್ ಸ್ಟಾಪ್ ಕಡೆ ನಡೆಯುತ್ತಿದ್ದ ಅನುರಾಗನಿಗೆ ಅಲ್ಲೇ ದಾರಿಯಲ್ಲಿದ್ದ ಗೋಪಾಲಕೃಷ್ಣನ ಗುಡಿಯೊಂದು ಕಾಣಿಸಿತು. ದೇವರ ಆಶೀರ್ವಾದ ಪಡೆದೇ ಹೋಗೋಣ ಎಂದುಕೊಂಡು ಗುಡಿಯೊಳಗೆ ನಡೆದ ಅನುರಾಗ್. ದೇವರಿಗೆ ನಮಸ್ಕರಿಸಿ, ತೀರ್ಥ, ಪ್ರಸಾದ ಪಡೆದು, ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಘಂ ಅಂತ ಪುಳಿಯೋಗರೆಯ ಸುವಾಸನೆ ಮೂಗಿಗೆ ಬಡಿಯಿತು. ದೇವಾಲಯದ ಹೊರ ಸುತ್ತಿನಲ್ಲಿ ದೇವರಿಗೆ ನೈವೇದ್ಯವಾದ ಪುಳಿಯೋಗರೆಯನ್ನು ಹಂಚುತ್ತಿದ್ದಳ್ಳೊಬ್ಬಳು ಹುಡುಗಿ. ಅನುರಾಗನೂ ಸಾಲಿನಲ್ಲಿ ನಿಂತು ಪುಳಿಯೋಗರೆಯನ್ನು ಪಡೆದು ಅಲ್ಲೇ ಪಕ್ಕದಲ್ಲಿದ್ದ ಕಟ್ಟೆಯ ಮೇಲೆ ಕೂತು ತಿನ್ನಲಾರಂಭಿಸಿದ. ಹಸಿದ ಹೊಟ್ಟೆಗೆ ಆ ಪುಳಿಯೋಗರೆಯ ನಾಲ್ಕು ತುತ್ತು ಅಮೃತದಂತೆನ್ನಿಸಿತು. ಪುಳಿಯೋಗರೆ ಖಾಲಿಯಾದರೂ ಉಳಿದಿದ್ದ ಪ್ರತಿಯೊಂದು ಅಗಳನ್ನೂ ತಿನ್ನುತ್ತಿದ್ದ ಅನುರಾಗನ ಮುಂದೆ ಇನ್ನೊಂದು ಎಲೆಯಲ್ಲಿ ತುಂಬಿದ್ದ ಪುಳಿಯೋಗರೆಯನ್ನು ಯಾರೋ ಹಿಡಿದರು. ಹಾಕಿದ್ದ ಹಸಿರು ಬಳೆಗಳು, ಮುದ್ದಾದ ಕೈಗಳಿಗೆ ಹಚ್ಚಿದ್ದ ಮದರಂಗಿ. ಕಣ್ಣೆತ್ತಿ ನೋಡಿದ ಅನುರಾಗ್. ಅದೇ ಹುಡುಗಿ. ಪುಳಿಯೋಗರೆ ಹಂಚುತ್ತಿದ್ದ ಹುಡುಗಿ. ಇವನು ತಿನ್ನುತ್ತಿದ್ದ ರೀತಿಯನ್ನು ನೋಡಿ, ತುಂಬಾ ಹಸಿವಾಗಿರಬೇಕು ಎಂದು ಮತ್ತೊಂದಿಷ್ಟು ಪುಳಿಯೋಗರೆ ಕೊಡಲು ಬಂದಿದ್ದಳು ಆ ಹುಡುಗಿ. ತೆಗೆದುಕೊಳ್ಳಲು ಮುಜುಗರವೆನ್ನಿಸಿದರೂ ಹಸಿವೆಗೆ ನಾಚಿಕೆಯ ಪರಿವೆಲ್ಲಿ ಇರುವುದು. ಹಾಗಾಗಿ ಅನುರಾಗ್ ಅವಳು ಕೊಟ್ಟ ಪುಳಿಯೋಗರೆಯನ್ನು ತಿಂದ. ಹಸಿದ ಹೊಟ್ಟೆಗೆ ಎಷ್ಟೋ ಹಿತವೆನ್ನಿಸಿತ್ತು. ಧನ್ಯವಾದ ಹೇಳಬೇಕು ಎನ್ನುವುದರೊಳಗೆ ಆ ಹುಡುಗಿ ಅಲ್ಲಿಂದ ಮಾಯವಾಗಿದ್ದಳು.

ಅನುರಾಗ್ ತನ್ನ ವಿದ್ಯಾಭ್ಯಾಸ ಮುಗಿಸಿ, ಕೆಲಸ ಹುಡುಕಲೆಂದು ಬೆಂಗಳೂರಿನಲ್ಲಿದ್ದ ತನ್ನ ಅಣ್ಣನ ಮನೆಗೆ ಬಂದಿದ್ದ. ಅಣ್ಣ ಮಾಧವ್ ಒಳ್ಳೆಯ ಕೆಲಸದಲ್ಲಿದ್ದನು. ಅತ್ತಿಗೆ ಸಹನಾ‌ ಕೂಡ ನೌಕರಿಯಲ್ಲಿದ್ದಳು. ಅನುರಾಗ್ ಇವರ ಮನೆಗೆ ಬಂದಿರುವುದೇಕೋ ಮಾಧವ್, ಸಹನಾ ಇಬ್ಬರಿಗೂ ಇಷ್ಟವಿರಲಿಲ್ಲ. ಆದರೆ ಊರಿನಲ್ಲಿದ್ದ ಅಮ್ಮ ಜಾನಕಿಯವರ ಮಾತು ಮೀರಲಾರದೆ ಅನುರಾಗನನ್ನು ಮನೆಯಲ್ಲಿ ಇರಿಸಿಕೊಂಡಿದ್ದ ಮಾಧವ್. ಕೆಲಸ ಇಲ್ಲದ ನಿರುದ್ಯೋಗಿಯೆಂದು ಅಣ್ಣ, ಅತ್ತಿಗೆ ಮಾಡುತ್ತಿದ ಅವಮಾನ, ಆಡುತ್ತಿದ್ದ ಚುಚ್ಚು ಮಾತುಗಳು ಅನುರಾಗನ ಮನಸಿಗೆ ಹಿಂಸೆ ಕೊಡುತ್ತಿತ್ತು.‌ ಎಷ್ಟೋ ಬಾರಿ ಸಹನಾ ಇಬ್ಬರಿಗಾಗುವಷ್ಟೇ ಅಡಿಗೆ ಮಾಡಿಡುತ್ತಿದ್ದಳು. ಕೇಳಿದರೆ ಅಳತೆ ಗೊತ್ತಾಗಲಿಲ್ಲ. ಇವತ್ತೊಂದು ದಿನ ಎಡ್ಜಸ್ಟ್ ಮಾಡಿಕೋ ಎಂಬ ಸಮಜಾಯಿಷಿ ಕೊಡುತ್ತಿದಳು. ಇರುವ ಇಬ್ಬರು ಮತ್ತೊಬ್ಬರಿಗೆ ಅಡಿಗೆ ಮಾಡಲು ಗೊತ್ತಾಗಲಿಲ್ಲ ಎನ್ನುವ ಸಹನಾಳ ಮಾತುಗಳು ಸುಳ್ಳೆಂದು ಅನುರಾಗನಿಗೆ ತಿಳಿದಿದ್ದರೂ ಎದುರಾಡುವಂತಿರಲಿಲ್ಲ. ಎಷ್ಟೋ ಬಾರಿ ನೀರು, ಒಂದಿಷ್ಟು ಬಿಸ್ಕತ್ತುಗಳಿಂದಲೇ ಅನುರಾಗ್ ತನ್ನ ಹಸಿವು ತಣಿಸಿಕೊಳ್ಳುತ್ತಿದ್ದ. ಸಿಗದ ಕೆಲಸ, ಯಾವಾಗಲೂ ಖಾಲಿಯಾಗಿರುವ ಜೇಬು, ಮನೆಯಲ್ಲಿ ತಾತ್ಸಾರವೇ ಸತ್ಕಾರ, ಇವೆಲ್ಲವನ್ನೂ ಸಹಿಸಿ, ಸಹಿಸಿ ಅನುರಾಗನಿಗೂ ರೋಸಿ ಹೋಗಿತ್ತು. ಆದರೆ ಇನ್ನೆಲ್ಲೋ ಹಾಸ್ಟೆಲ್ಲಿನಲ್ಲೋ, ಪಿಜಿಯಲ್ಲೋ ಇರುವ ಪರಿಸ್ಥಿತಿಯಲ್ಲೂ ಅನುರಾಗ್ ಇರಲಿಲ್ಲ. ಹಾಗಾಗಿ ಕಷ್ಟವೋ, ಸುಖವೋ ಅಣ್ಣನ ಮನೆಯಲ್ಲೇ ದಿನ ದೂಡುತ್ತಿದ್ದ.

ಅಂದೂ ಕೂಡ ಎಂದಿನಂತೆ ಅನುರಾಗ್ ಹೋಗಿದ್ದ ಇಂಟರ್ವ್ಯೂವಿನಲ್ಲಿ ಅವನು ಸೆಲೆಕ್ಟ್ ಆಗಿರಲಿಲ್ಲ. ಮನೆಗೆ ಬಂದಾಗ ಮತ್ತದೇ ಕೊಂಕಿನ ಮಾತುಗಳು. ಮನೆಯಲ್ಲಿರಲು ಮನಸಾಗದೇ ಹೊರಗೆ ಬಂದವನು ಮತ್ತೆ ಗೋಪಾಲಕೃಷ್ಣ ಗುಡಿಯ ಕಡೆಗೆ ನಡೆದ. ಸಂಜೆಯ ಸಮಯ ಗುಡಿಯ ಸುತ್ತ ಹಣತೆಯಲ್ಲಿ ದೀಪ ಬೆಳಗುತ್ತಿದ್ದಳಾ ಹುಡುಗಿ. ಅವಳೇ ಬೆಳಿಗ್ಗೆ ಪುಳಿಯೋಗರೆ ಕೊಟ್ಟ ಹುಡುಗಿ. ಅವಳನ್ನು ನೋಡಿ ತನಗೇ ಅರಿವಾಗದಂತೆ ಅನುರಾಗನ ಮೊಗದಲ್ಲೊಂದು ಮಂದಹಾಸ ಮೂಡಿತು. ಕೆಲವರ ಲಕ್ಷಣವೇ ಹಾಗೆ. ಅವರ ಮುಖಾರವಿಂದ ನೋಡುತ್ತಲೇ ಮನಸಿಗೇನೋ ಒಂದು ರೀತಿಯ ನೆಮ್ಮದಿ ದೊರಕುವುದು. ಇವಳಲ್ಲೂ ಅಂತಹದ್ದೇನೋ ಅಡಗಿದೆ ಎಂದೆನ್ನಿಸಿತು ಅನುರಾಗನಿಗೆ. ಆ ಮುಸ್ಸಂಜೆ, ತಂಪಾದ ಗಾಳಿ, ಹಚ್ಚಿದ್ದ ಹಣತೆಯ ಬೆಳಕಿನ ನಡುವೆ ಕಂಡ ಆ ಹುಡುಗಿಯ ನಗುಮೊಗ ಇವೆಲ್ಲವೂ ಅನುರಾಗನ ಮನಸಿನಲ್ಲಿ ಅಚ್ಚಳಿಯದಂತೆ ಉಳಿಯಿತು. ನೊಂದಿದ್ದ ಮನಸಿಗೆ ಏನೋ ಒಂದು ರೀತಿಯ ನೆಮ್ಮದಿ ತಂದಿತು.

ಮರುದಿನವೂ ಅನುರಾಗನ ಹೊಟ್ಟೆ ತುಂಬಿಸಿದ್ದು ಆ ಹುಡುಗಿ ಕೊಟ್ಟ ಪುಳಿಯೋಗರೆಯೇ. ಎಲ್ಲರೊಂದಿಗೂ ನಗುತ್ತಲೇ ವ್ಯವಹರಿಸುತ್ತ, ಇಡೀ ದೇವಸ್ಥಾನದ ಕೆಲಸಗಳನ್ನು ಮಾಡುತ್ತಿದ್ದ ಆ ಹುಡುಗಿ ದೇವಸ್ಥಾನದ ಅರ್ಚಕರ ಮಗಳೆಂದು ತಿಳಿಯಲು ಅನುರಾಗನಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ನಿರುದ್ಯೋಗ, ಅಣ್ಣ ಅತ್ತಿಗೆಯ ಚುಚ್ಚು ಮಾತುಗಳು ಇವೆಲ್ಲದರ ನಡುವೆ ಬದುಕುತ್ತಿದ್ದ ಅನುರಾಗನಿಗೆ ಆ ಗೋಪಾಲಕೃಷ್ಣ ದೇವಸ್ಥಾನವೇ ಒಂದು ರೀತಿಯ ನೆಮ್ಮದಿ ತಾಣದಂತಿತ್ತು. ಆಗೊಮ್ಮೆ ಈಗೊಮ್ಮೆ ಸಿಗುತ್ತಿದ್ದ ಆ ಹುಡುಗಿಯ ಮಂದಹಾಸವೇ ಜೀವಗಂಗೆಯಂತಾಗಿತ್ತು. ಹೀಗೇ ತಿಂಗಳುಗಳೇ ಉರುಳಿದವು. ಕಾಲ ಯಾವತ್ತೂ ಒಂದೇ ರೀತಿ ಇರುವುದಿಲ್ಲ. ಕತ್ತಲೆ ಕಳೆದ ನಂತರ ಬೆಳಕು ಮೂಡಲೇ ಬೇಕು. ಅನುರಾಗನ ಜೀವನದಲ್ಲೂ ಹಾಗೆಯೇ ಆಗಿತ್ತು. ಅವನ‌ ಅಷ್ಟು ಸಮಯದ ಪರಿಶ್ರಮಕ್ಕೆ ಪ್ರತಿಫಲ ದೊರಕಿತ್ತು. ದೊಡ್ಡ ಕಂಪೆನಿಯೊಂದರಲ್ಲಿ ಒಳ್ಳೆಯ ಕೆಲಸವೇ ಸಿಕ್ಕಿತ್ತು. ಅನುರಾಗನಿಗಾದ ಖುಷಿಗಂತೂ ಪಾರವೇ ಇರಲಿಲ್ಲ. ಅಂತೂ ಈ ನಿರುದ್ಯೋಗದಿಂದ ತನಗೆ ಮುಕ್ತಿ ಸಿಕ್ಕಿತಲ್ಲ ಎನ್ನುವುದೇ ಅನುರಾಗನಿಗೆ ಬಹಳ ಸಂತಸದ ವಿಷಯವಾಗಿತ್ತು. ಮೊದಲು ವಿಷಯವನ್ನು ತನ್ನ ತಾಯಿ ಜಾನಕಿಯವರಿಗೆ ತಿಳಿಸಿದ. ಜಾನಕಿಯವರೂ ಬಹಳ ಸಂತೋಷಪಟ್ಟರು. ಮನೆಗೆ ಹೋಗುತ್ತ ಸ್ವೀಟ್ ಪ್ಯಾಕೆಟಿನೊಂದಿಗೇ ಹೋಗಿದ್ದ. ವಿಷಯ ತಿಳಿದ ಮಾಧವ ಮತ್ತು ಸಹನಾಳೂ ಖುಷಿಯಾದರು.

ಮರುದಿನ ಬೆಳಿಗ್ಗೆ ಆಫೀಸಿಗೆ ಹೊರಟ ಅನುರಾಗನನ್ನು ತಡೆದ ಸಹನಾ

" ಬಿಸಿ ಬಿಸಿಯಾದ ದೋಸೆ, ಬೆಣ್ಣೆ, ಕಾಯಿ ಚಟ್ನಿ ಎಲ್ಲ ರೆಡಿಯಾಗಿದೆ ಅನಿ, ತಿಂದು ಹೋಗು " ಎಂದಳು. ಎಂದೂ ಇಲ್ಲದ ಅತ್ತಿಗೆಯ ಈ ಉಪಚಾರ ನೋಡಿ ಅನುರಾಗನಿಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಈ ಪ್ರೀತಿ, ಉಪಚಾರವೆಲ್ಲ ನನಗಾಗಿ ಅಲ್ಲ, ನನಗೆ ದೊರಕಿರುವ ನೌಕರಿಗಾಗಿ ಎಂದು ಅನ್ನಿಸಿ ವಿಷಾದದ ನಗುವೊಂದು ಮೂಡಿತು ಅನುರಾಗನ ಮೊಗದಲ್ಲಿ.

" ಬೇಡ ಅತ್ತಿಗೆ. ನನಗೆ ಲೇಟ್ ಆಗಿದೆ " ಎಂದಷ್ಟೇ ಹೇಳಿ ಮನೆಯಿಂದ ಹೊರ ನಡೆದ ಅನುರಾಗ್.

ದಾರಿಯಲ್ಲಿ ಸಿಕ್ಕ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೋಗಿ ದೇವರಿಗೆ ಮನಸಾರೆ ವಂದನೆ ಸಲ್ಲಿಸಿದ್ದ. ಅವನ ಜೀವನದ ಹೊಸ ಅಧ್ಯಾಯವೊಂದು ಆರಂಭವಾಗಿತ್ತು. ಹೊರಾಂಗಣಕ್ಕೆ ಬಂದಾಗ ಮತ್ತದೇ ಹುಡುಗಿಯ ದರ್ಶನವಾಯಿತು. ನಗುಮೊಗದೊಂದಿಗೆ ಅಲ್ಲರಿಗೂ ಪ್ರಸಾದ ಹಂಚುತ್ತಿದ್ದಳು. ಆಫೀಸಿನ ಕ್ಯಾಂಟೀನಿನಲ್ಲೇ ಬಗೆ ಬಗೆಯ ತಿಂಡಿಗಳು ಸಿಗುತ್ತಿದ್ದರೂ ಅನುರಾಗನಿಗೆ ದೇವಸ್ಥಾನದ ಆ ಪುಳಿಯೋಗರೆಯೇ ಹಿಡಿಸುತ್ತಿತ್ತು. ಎಷ್ಟೋ ದಿನಗಳು ಅವನ ಹಸಿವನ್ನು ನೀಗಿಸಿದ್ದು ಅದೇ ಪ್ರಸಾದ. ಅದು ಕೇವಲ ಅವನ ಹೊಟ್ಟೆಯನ್ನು ಮಾತ್ರವಲ್ಲ, ಅವನ ಮನಸನ್ನೂ ತುಂಬಿಸಿತ್ತು.

ಅಂದು ಸಂಜೆ ಮನೆಗೆ ಬಂದ ಅನುರಾಗನನ್ನು ಎದಿರುಗೊಂಡಿದ್ದರು ಜಾನಕಿಯವರು. ಅಮ್ಮನನ್ನು ನೋಡಿದ ಅನುರಾಗನಿಗೆ ಬಹಳ ಖುಷಿಯಾಗಿತ್ತು. ರಾತ್ರಿ ಊಟದ ನಂತರ ತಾವು ಬಂದ ಕಾರಣವನ್ನು ತಿಳಿಸಿದರು ಜಾನಕಿ. ಹೇಗೂ ಅನುರಾಗನಿಗೆ ಒಳ್ಳೆಯ ಕೆಲಸ ಸಿಕ್ಕಿದೆ, ಆದಷ್ಟು ಬೇಗ ಮದುವೆ ಮಾಡಿ ಬಿಡೋಣ. ಅಲ್ಲಿ ಇಲ್ಲಿ ಹೆಣ್ಣನ್ನು ನೋಡುವ ಬದಲು ತನ್ನ ತಂಗಿ ಭಾವನಾಳನ್ನೇ ಏಕೆ ಅನುರಾಗನಿಗೆ ತಂದುಕೊಳ್ಳಬಾರದು ಎಂದ ಸಹಾನಾಳ ಪ್ರಸ್ತಾಪದ ಕುರಿತು ಮಾತನಾಡಲೇ ತಾನು ಬಂದಿದ್ದು ಎಂದರು ಜಾನಕಿ.

ಇಷ್ಟು ದಿನ ತನಗೆ ನೌಕರಿಯಿಲ್ಲ ಎಂದು ತನ್ನನ್ನು ಕೀಳಾಗಿ ನಡೆಸಿಕೊಂಡ ಅತ್ತಿಗೆ ಈಗ ತಾನು ಚೆನ್ನಾಗಿ ದುಡಿಯುತ್ತೇನೆ ಎನ್ನುವ ಕಾರಣಕ್ಕೆ ತಮ್ಮ ತಂಗಿಯನ್ನೇ ಕೊಟ್ಟು ಮದುವೆ ಮಾಡಲು ಮುಂದಾಗಿರುವ ವಿಷಯ ತಿಳಿದು ವಿಪರ್ಯಾಸವೆನ್ನಿಸಿತು ಅನುರಾಗನಿಗೆ.

" ಅಮ್ಮ, ನಾನು ಮದುವೆಯಾಗುವ ಹುಡುಗಿ ನನಗೆ ಒಪ್ಪಿಗೆಯಾಗಬೇಕು. ನನಗೆ ಒಪ್ಪಿಗೆಯಾಗುವಂತವಳನ್ನು ನಾನೇ ಆರಿಸಿಕೊಳ್ಳುತ್ತೇನೆ " ಎಂದು ಹೇಳಿದ ಅನುರಾಗನ ಮಾತಿಗೆ ಜಾನಕಿಯವರು ತಲೆಯಾಡಿಸಿದ್ದರು.

ಮರುದಿನ ಸಂಜೆಯೇ ಗೋಪಾಲಕೃಷ್ಣ ಗುಡಿಗೆ ಹೋದ ಅನುರಾಗ್ ಅರ್ಚಕರ ಮಗಳಲ್ಲಿ ನೇರವಾಗಿ ಮಾತನಾಡಿದ.

" ಬಹಳ ದಿನಗಳಿಂದ ನಾನು ಇಲ್ಲಿಗೆ ಬರುತ್ತಿದ್ದೇನೆ. ಮಾತನಾಡದಿದ್ದರೂ ಇಬ್ಬರಿಗೂ ಪರಿಚಯವಂತೂ ಇದೆ. ಎಷ್ಟೋ ದಿನಗಳು ಅನ್ನಪೂರ್ಣೇಶ್ವರಿಯಂತೆ‌ ನೀವು ನನ್ನ ಹಸಿವನ್ನು ನೀಗಿದ್ದೀರ. ನಿಮ್ಮ ಸರಳತೆ, ಸೌಜನ್ಯ, ಮರುಭೂಮಿಯಲ್ಲೂ ಹೂವರಳಿಸಬಲ್ಲಂತಹ ಆ ತಣ್ಣನೆಯ ನಗು ಇವೆಲ್ಲವೂ ನನಗೆ ಬಹಳ ಇಷ್ಟ. ನನಗೆ ಸುತ್ತಿ ಬಳಸಿ ಮಾತನಾಡಲು ಬರುವುದಿಲ್ಲ. ನೇರವಾಗಿ ಕೇಳುತ್ತೇನೆ. ನನ್ನನ್ನು ಮದುವೆಯಾಗುತ್ತೀರ " ಎಂದು ಕೇಳಿದ ಅನುರಾಗನ ಪ್ರಶ್ನೆಗೆ ಆ ಹುಡುಗಿ ಏನೂ ಮಾತನಾಡದೆ ತನ್ನ ಕಂಗಳಲ್ಲಿ ನೀರು ತುಂಬಿಕೊಂಡು ದೇವಸ್ಥಾನದೊಳಗೆ ಓಡಿದ್ದಳು. ಅವಳ ಈ ನಡೆಯೇ ಅರ್ಥವಾಗಿರಲಿಲ್ಲ ಅನುರಾಗನಿಗೆ. ಇಷ್ಟವಿದ್ದರೆ‌ ಸಮ್ಮತಿಸಲಿ. ಇಲ್ಲವೆಂದರೆ ಇಲ್ಲ ಎಂದು ಹೇಳಲಿ. ಅದರಲ್ಲಿ ಅಳುವುದಕ್ಕೇನಿದೆ ಎನ್ನುವುದೇ ಅವನನ್ನು ಕಾಡಿತ್ತು. ಮರುದಿನ ಸಂಜೆ ಮತ್ತೆ ಗುಡಿಗೆ ಬಂದವನು ಆ ಹುಡುಗಿಯನ್ನು ಹುಡುಕಾಡಿದ. ಆದರೆ ಅವಳು ಕಾಣಲಿಲ್ಲ. ಅವಳ ತಂದೆ, ಆ ದೇವಸ್ಥಾನದ ಅರ್ಚಕರು ಅನುರಾಗನ ಬಳಿ ಬಂದರು.

" ನಿನ್ನೆ ನಡೆದದ್ದೆಲ್ಲವನ್ನು ರಂಜಿನಿ, ಅಂದರೆ ನನ್ನ ಮಗಳು ನನಗೆ ತಿಳಿಸಿದಳು. ನೀನು ಅವಳನ್ನು ಮದುವೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದು..!! "

" ಹೌದು. ನಾನು ನಿಮ್ಮ ಮಗಳನ್ನು ಇಷ್ಟಪಡುತ್ತಿದ್ದೇನೆ. ಆ ವಿಷಯವನ್ನು ನಿನ್ನೆ ಅವರಲ್ಲಿ ಹೇಳಿದಾಗ ಏನೂ ಉತ್ತರಿಸದೆ ಹಾಗೆಯೇ ಹೋದರು. ನೀವು ಬೇಕಿದ್ದರೆ ನನ್ನ ಬಗ್ಗೆ ವಿಚಾರಿಸಿ. ಇಲ್ಲೇ ಪಕ್ಕದ ಬೀದಿಯಲ್ಲೇ ನಮ್ಮ ಮನೆಯಿರೋದು. ನಾನು ಸಭ್ಯಸ್ತ, ಯೋಗ್ಯ ಎಂದು ನಿಮಗನ್ನಿಸಿದರೆ ಮಾತ್ರ ಈ ಮದುವೆಯ ಪ್ರಸ್ತಾಪವನ್ನು ಮುಂದುವರೆಸಿ "

" ನಿನ್ನ ಬಗ್ಗೆ ನನಗೆಲ್ಲ ತಿಳಿದಿದೆಯಪ್ಪ. ಆದರೆ ನಮ್ಮ ರಂಜಿನಿ ಬಗ್ಗೆ ನಿನಗೆ ಗೊತ್ತಾದರೆ, ನೀನು ನಿನ್ನ ನಿರ್ಧಾರವನ್ನೇ ಬದಲಿಸಬಹುದು. ಅವಳು ನಿನ್ನ ಪ್ರಸ್ತಾಪಕ್ಕೆ ಏನೂ ಹೇಳಲಾರಳು. ಯಾಕೆಂದರೆ ಅವಳಿಗೆ ಮಾತು ಬರುವುದಿಲ್ಲ. ಇದೇ ಕಾರಣಕ್ಕೆ ಯಾರೂ ಅವಳನ್ನು ಒಪ್ಪಲಿಲ್ಲ. ಈಗ ಹೇಳು, ಈಗಲೂ ಅವಳನ್ನು ಮದುವೆಯಾಗುವ ಇಚ್ಛೆಯಿದೆಯೇ ನಿನಗೆ. "

ಅರ್ಚಕರ ಮಾತು ಕೇಳಿದ ಅನುರಾಗನಿಗೆ ಆಘಾತವಾಯಿತು. ಅಷ್ಟು ಸುಂದರ ಮೊಗದ ಹಿಂದೆ ಇಷ್ಟು ನೋವಿನ ಸಂಗತಿಯೇ. ಯಾರು ಏನೇ ಹೇಳಿದರೂ ಸದಾ ಮಂದಹಾಸ ಬೀರುತ್ತಿದ್ದವಳಿಗೆ ಮಾತೆ ಬರುವುದಿಲ್ಲ ಎಂದು ನನಗೆ ತಿಳಿಯಲೇ ಇಲ್ಲವಲ್ಲ. ಪಾಪ ರಂಜಿನಿ. ಹೀಗೆ ಅನುರಾಗನ ಮನಸ್ಸು ರಂಜಿನಿಯ ಬಗ್ಗೆಯೇ ಯೋಚಿಸುತ್ತಿತ್ತು. ಅನುರಾಗ್ ಏನೂ ಮಾತನಾಡದೇ ಸುಮ್ಮನಿದ್ದದ್ದನ್ನು ನೋಡಿ, ವಿಷಯ ತಿಳಿದ ಮೇಲೆ ಇವನ ನಿರ್ಧಾರವೂ ಬದಲಾಗಿರಬೇಕು. ಎಲ್ಲರೂ ಇಷ್ಟೇ ಎಂದುಕೊಳ್ಳುತ್ತ ಅರ್ಚಕರು ಗುಡಿಯ ಕಡೆಗೆ ನಡೆದರು.

ಪೂಜೆಗೆಂದು ಒಂದಿಷ್ಟು ಹೂವುಗಳನ್ನು ತರುತ್ತಿದ್ದ ರಂಜಿನಿಯನ್ನು ನೋಡಿ ಅನುರಾಗ್ ಮನದಲ್ಲೇ ಏನೋ ನಿಶ್ಚಯಿಸಿದ. ಅವಳ ಬಳಿ ಬಂದವನು

" ಭಾವನೆಗಳಿಗೆ ಮೌನವೇ ಭಾಷೆ. ನನಗೆ ನಿಮ್ಮ ಮೇಲೆ ಹುಟ್ಟಿದ ಪ್ರೀತಿಗೆ ಸಾಕ್ಷಿಯಾಗಿದ್ದು ಅದೇ ಮೌನ, ಹಾಗೂ ನಿಮ್ಮ ಆ ಮಂದಹಾಸ. ನಿಮ್ಮನ್ನು ನೋಡಿದಾಗಲೆಲ್ಲ ನನ್ನ ಮನಸಲ್ಲಿ ಮೂಡುವ ಆ ನಿರಾಳತೆಯನ್ನು, ನೆಮ್ಮದಿಯನ್ನು ಪದಗಳಲ್ಲಿ ಬಣ್ಣಿಸಲು ನನಗೂ ಸಾಧ್ಯವಿಲ್ಲ. ನನಗೆ ಈಗಲೂ ನೀವು ಇಷ್ಟ. ನಿಮ್ಮ ತಂದೆ ಹೇಳಿದಂತೆ ನನ್ನ‌ ನಿರ್ಧಾರದಲ್ಲಿ ಯಾವ ಬದಲಾವಣೆಯೂ ಇಲ್ಲ. ನಿಮಗೆ ನಾನು ಒಪ್ಪಿಗೆಯೇ. ನನ್ನನ್ನು ಮದುವೆಯಾಗಲು ಸಮ್ಮತಿಯಿದೆಯೇ " ಎಂದು ಕೇಳಿದ ಅನುರಾಗನ ಮಾತಿಗೆ ರಂಜಿನಿಯ ಕಣ್ಣಾಲಿಗಳು ಖುಷಿಯಿಂದ ತೇವವಾದವು. ಅವಳ ಮನಸು ಅರಳು ಮಲ್ಲಿಗೆಯಂತೆಯೇ ಅರಳಿ, ಮೊಗದಲ್ಲಿ ನಸುನಗುವು ಮೂಡಿತು.

About the Competition

The Poetry and Creative Writing Competition 2026, presented by Hashtag Kalakar, is a prestigious platform celebrating the richness of literary talent across the globe. This competition showcases original works of poetry, short stories, and creative writing, encouraging writers to share their unique perspectives and voices. Participants have the opportunity to engage with a vibrant community of artists and gain recognition for their creative endeavors.

We extend our heartfelt gratitude to Bindu u for sharing the touching short story "ರಾಗ ರಂಜಿನಿ" with us in the Poetry and Creative Writing Competition 2026. Your contribution enriches the tapestry of narratives that define this year's competition, offering readers a glimpse into the profound themes of love and resilience. Thank you, Bindu u, for your inspiring work.

About Hashtag Kalakar

Hashtag Kalakar is a creative platform dedicated to providing artists, writers, singers and other creative talents with opportunities to showcase their work and reach wider audiences through competitions, features and creative initiatives.

 
 
 

Comments

Rated 0 out of 5 stars.
No ratings yet

Add a rating
bottom of page