"ಯದ್ ಭಾವಂ ತದ್ ಭವತಿ"
- Hashtag Kalakar
- Dec 15, 2025
- 1 min read
By MadhuKeerthi C M
ತನ್ನ ರೂಮ್ ಗೆ ಬಂದು ಬ್ಯಾಗ್ ಪಕ್ಕಕ್ಕೆ ಇಟ್ಟು ಹಾಸಿಗೆ ಮೇಲೆ ಹಾಗೆ ಸುಸ್ತಾಗಿ ಮಲಗಿಕೊಂಡ ಗಗನ್ ಗೆ ಇವತ್ತು ಬೆಳಿಗ್ಗೆಯಿಂದ ಸಂಜೆ ತನಕ ಆಫೀಸ್ ನಲ್ಲಿ ನಡೆದ ಘಟನೆಗಳೆಲ್ಲ ಒಂದೊಂದೇ ನೆನಪಿಗೆ ಬಂದು ತಲೆ ಚಿಟ್ಟು ಹಿಡಿಯುವಷ್ಟು ಹಿಂಸೆ ಆಗಿ ಕಣ್ಣುಗಳನ್ನು ಮುಚ್ಚಿ ಇನ್ನೇನೋ ಕತ್ತಲೆಯಲ್ಲಿ ಶೂನ್ಯ ಸ್ಥಿತಿ ತಲುಪಿದ ಎನ್ನುವಾಗಲೇ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಫೋನ್ ರಿಂಗ್ ಆಯ್ತು, ಕಣ್ಣು ತೆರೆಯದೆಯೇ ಕಾಲ್ ರಿಸೀವ್ ಮಾಡಿದ ಗಗನ್ ಗೆ ನವೀನ್ ಧ್ವನಿ ಕೇಳಿದ ತಕ್ಷಣವೇ ತಾನು ಮರೆತ ವಿಷಯ ನೆನಪಿಗೆ ಬಂದು ತಟ್ಟನೆ ಎದ್ದು ಕುಳಿತ!
ಆ ಕಡೆಯಿಂದ ಸ್ನೇಹಿತ ನವೀನ್, " ಏನ್ ಸರ್ ಎಲ್ಲಾ ಹೇಳಿದ ಸ್ಪಾಟ್ ಗೆ ಬಂದು ಸೇರಿದ್ದಾರೆ, ನೀವು ಈಗ ಎಲ್ಲಿದ್ದೀರಾ ಅಂತ ಗೊತ್ತಾದ್ರೆ, ನಾವು ನಿಮ್ಗೆ ಕಾಯೋದು ಬೇಡ್ವೋ ಅಂತ ನಿರ್ಧಾರ ಮಾಡ್ತೀವಿ" ಅಂತ ತುಂಬ ನಾಟಕೀಯವಾಗಿ ಹೇಳಿದ!
ಗಗನ್ "ನಾನು ಇವಾಗ್ ಆಫೀಸ್ ಯಿಂದ ಬಂದೆ ಫ್ರೆಶ್ಅಪ್ ಆಗಿ ಬರೋದಿಕ್ಕೆ ಸ್ವಲ್ಪ ಲೇಟ್ ಆಗುತ್ತೆ, ಸೋ ನೀವು ಹೋಗಿ, ನಾನು ಅದಷ್ಟು ಬೇಗ ನಿಮ್ಮನ್ನ ಜಾಯಿನ್ ಆಗ್ತೀನಿ" ಅಂತ ಹೇಳಿದಾಗ
ನವೀನ್, "ಗೊತ್ತು ಬಿಡೋ, ನಿಂದು ಯಾವಾಗ್ಲೂ ಇದೇ ಕಥೆ ಅಲ್ವಾ, ನಿನಗೆ ಲೊಕೇಶನ್ ಕಲಿಸಿದ್ದೀನಿ ಮತ್ತೆ ಕಾಡು ದಾರಿ ನೈಟ್ ಟೈಮ್ ಬೇರೆ ಜೋಪಾನವಾಗಿ ಬಾ" ಅಂತ ಹೇಳಿ ಕಾಲ್ ಕಟ್ ಮಾಡಿದ.
ಒಂದು ವಾರದ ಹಿಂದೆಯೇ ನವೀನ್ ತನ್ನ ಊರಿನ ಬಳಿ ಇರುವ ಕಾಡು ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗುವುದಕ್ಕೆ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಆಪ್ತ ಸ್ನೇಹಿತರಿಗೆ ತಿಳಿಸಿದ್ದ, ಟ್ರಕ್ಕಿಂಗ್ ಹಿಂದಿನ ದಿನ ಸಂಜೆ ಬೇಗನೆ ಎಲ್ಲಾ ಬೆಂಗಳೂರು ಬಿಟ್ಟು ರಾತ್ರಿ 10 ಗಂಟೆ ಆಗುವ ಮೊದಲು ಟ್ರಕ್ಕಿಂಗ್ ಶುರು ಮಾಡುವ ಜಾಗದ ಸಮೀಪದಲ್ಲಿರು ತನ್ನ ಮತ್ತೊಬ್ಬ ಸ್ನೇಹಿತನ ತೋಟದ ಮನೆಯನ್ನು ಸೇರುವದು ಮತ್ತು ಅಲ್ಲಿ ಮೋಜು ಮಸ್ತಿ ಮಾಡಿ ರಾತ್ರಿ 12ರ ಒಳಗೆ ಮಲಗಿ ಮತ್ತೆ ಬೆಳಿಗ್ಗೆ ಬೇಗ ಎದ್ದು ಫ್ರೆಶ್ಅಪ್ ಆಗಿ ಟ್ರಕ್ಕಿಂಗ್ ಪ್ರಾರಂಭಿಸುವುದು... ಹೀಗೆ ಪ್ಲಾನಿಂಗ್ ಮಾಡಿ ಮುಗಿಸಿದ್ದ, ಕೆಲಸದ ಒತ್ತಡದ ನಡುವೆ ಇದನ್ನು ಮರೆತಿದ್ದ ಗಗನ್ ಈಗ ಬೇಗ ಫ್ರೆಶ್ಅಪ್ ಆಗಿ ಟ್ರಕ್ಕಿಂಗ್ ಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಮೊಬೈಲ್ ನಲ್ಲಿ ಲೊಕೇಶನ್ ಆನ್ ಮಾಡಿ ತನ್ನ ಬೈಕ್ ಹತ್ತಿ ಹೊರಟ.
ಬೆಂಗಳೂರಿನಿಂದ ಸುಮಾರು 3 ಗಂಟೆಗಳ ಪ್ರಯಾಣ, ಸತತ ಒಂದೂವರೆ ಗಂಟೆ ಕಾಲ ಒಬ್ಬನೇ ಬೈಕ್ ಓಡಿಸಿ ರಸ್ತೆ ಬದಿಯಲ್ಲಿ ಕಂಡ ಟೀ ಅಂಗಡಿಯ ಬಳಿ ನಿಲ್ಲಿಸಿ ಧಮ್ ಎಳೆದು ತಡ ಮಾಡಿದರೆ ನನಗೆ ಕಷ್ಟ ಎಂದುಕೊಳ್ಳುತ್ತಾ ಪಕ್ಕದಲ್ಲಿಯೇ ಇದ್ದ ಪೆಟ್ರೋಲ್ ಬಂಕ್ ನಲ್ಲಿ ಫುಲ್ ಟ್ಯಾಂಕ್ ಮಾಡಿ ಇನ್ನೂ ಒಂದೂವರೆ ಎರಡು ಗಂಟೆಯಲ್ಲಿ ಡೆಸ್ಟಿನೇಷನ್ ರೀಚ್ ಆಗ್ತೀನಿ ಅಂತ ಮನಸ್ಸಿನಲ್ಲಿ ಅನ್ಕೊಂಡು ಪ್ರಯಾಣ ಮುಂದುವರಿಸಿದ....
ತಲುಪಬೇಕಾದ ಜಾಗ ಸುಮಾರು 10 ಕಿಲೋಮೀಟರ್ ಇದೆ ಅನ್ನೋ ಅಷ್ಟರಲ್ಲಿ ಸುತ್ತಮುತ್ತ ಜನರೇ ಕಾಣಿಸುತ್ತಿಲ್ಲ, ಎಂದುಕೊಳ್ಳುವ ಸಮಯಕ್ಕೆ ಸರಿಯಾಗಿ ನವೀನ್ ಮತ್ತೆ ಕಾಲ್ ಮಾಡಿ, "ಎಲ್ಲಿದಿಯೋ ಬರ್ತಾಯಿದ್ದೀಯಾ?" ಅಂತ ಪ್ರಶ್ನೆ ಮಾಡ್ತಾನೆ.
ಗಗನ್ "10 ಕಿಲೋಮೀಟರ್ ಇದೆ ಅಂತ ಮ್ಯಾಪ್ ನಲ್ಲಿ ತೋರಿಸ್ತಾಯಿದೆ" ಎಂದಾಗ ನವೀನ್, "ಮಗಾ ಹಾಗೇ ಮುಂದೆ ಬರ್ತ ಒಂದು ಕೆರೆ ಸಿಗುತ್ತಲ್ಲ, ಅಲ್ಲಿಂದ ಹಾಗೇ ಮುಂದೆ ಬಂದ್ರೆ,ಬಲಗಡೆಗೆ ಒಂದು ಅಡ್ಡದಾರಿ ಸಿಗುಗುತ್ತೆ, ಅಲ್ಲಿ ಟರ್ನ್ ತಕ್ಕೊ, ಅಲ್ಲಿಂದ ನಾವಿರುವ ಜಾಗಕ್ಕೆ ತುಂಬ ಹತ್ತಿರ ಆಗುತ್ತೆ."
ಅಂತ ಹೇಳಿ ಕಾಲ್ ಕಟ್ ಮಾಡಿದ ನವೀನ್ ಪಕ್ಕದಲ್ಲಿಯೇ ಇದ್ದ ಸ್ವಾಮಿ ಹೇಳಿದ "ನನಗೆ ಅವನು ಬರ್ತಿದ್ದಾನೆ ಅನ್ನೋದೇ ಡೌಟು, ಬೈಕ್ ಸೌಂಡ್ ಕೇಳಿಸ್ತಿತ್ತಾ?" ಅಂತ ತಲೆಗೆ ಹುಳಬಿಟ್ಟ!
ತಲೆಗೆ ಹುಳಬೇಡಿಸಿಕೊಂಡ ನವೀನ್ ಸ್ವಲ್ಪ ಏನೋ ಯೋಚಿಸಿ, ಇನ್ನೊಂದು ಸಲ ಕಾಲ್ ಮಾಡಿ ಕನ್ಫರ್ಮ್ ಮಾಡಿಕೊಂಡರೆ ಆಯ್ತು ಅಂತ ಗಗನ್ ಗೆ ಮತ್ತೆ ಕಾಲ್ ಮಾಡಿದ ಆದ್ರೆ ಈಗ ಅವನ ಫೋನ್ ಸಿಗ್ತಾಯಿಲ್ಲ! "ಫಾರೆಸ್ಟ್ ಏರಿಯಾ ಅಲ್ವಾ ನೆಟ್ವರ್ಕ್ ಸಿಗ್ತಾಯಿಲ್ಲ, ಅದು ಅಲ್ಲದೇ 10 ಕಿಲೋಮೀಟರ್ ಅಂತ ಹೇಳಿದ ಮ್ಯಾಕ್ಸಿಮಮ್ ಅಂದ್ರೆ ಅರ್ಧ ಗಂಟೆಯಲ್ಲಿ ಬಂದುಬಿಡ್ತಾನೆ" ಅಂತ ತನಗೆ ತಾನೇ ಹೇಳಿಕೊಂಡು ಸಮಾಧಾನ ಮಾಡಿಕೊಂಡ!
ನವೀನ್ ಹೇಳಿದಂತೆ ಮುಂದೆ ಕೆರೆಯ ನಂತರ ಒಂದು ಅಡ್ಡದಾರಿ ಕಾಣಿಸುತ್ತದೆ, ಆದ್ರೆ ಅದನ್ನು ಗಗನ್ ಗಮನಿಸದೇ ಹಾಗೇ ಮುಂದೆ ಪಾಸ್ ಆಗಿಬಿಡುತ್ತಾನೆ.
ಸ್ವಲ್ಪ ದೂರ ಹೋದನಂತರ ಇನ್ನು 8 ಕಿಲೋಮೀಟರ್ ಇದೆ ಅಂತ ಮ್ಯಾಪ್ ತೋರಿಸುವ ಸಮಯಕ್ಕೆ ಅಲ್ಲಿ ಕಂಡ ಅಡ್ಡ ದಾರಿಯನ್ನು ಇದೆ ನವೀನ್ ಹೇಳಿದ ದಾರಿ ಅಂತ ಭಾವಿಸಿ ಅದನ್ನು ಹಿಡಿಯುತ್ತಾನೆ!.
ಇಷ್ಟೊತ್ತು ರಸ್ತೆ ಚೆನ್ನಾಗಿದ್ದ ಕಾರಣಕ್ಕೂ ಏನೋ ಕಾಡಿನ ಕತ್ತಲು ಅಷ್ಟು ಭಯ ಎನ್ನಿಸುವಂತೆ ಒಂದು ಕ್ಷಣವೂ ಸಹ ಭಾಸವಾಗಿರಲಿಲ್ಲ, ಈಗ ಬೆಳದಿಂಗಳ ಚಂದ್ರನನ್ನು ನೋಡಿದರು ಬೆವರು ಬರುತ್ತಿರುವುದು ಸ್ವತಃ ಅವನಿಗೆ ಆಶ್ಚರ್ಯವಾಯ್ತು!
ಆ ಕೆಟ್ಟ ರಸ್ತೆಯಲ್ಲಿ ಯಾಕಾದ್ರೂ ಬಂದೆನೋ ಅಂತ ಯೋಚಿಸುವಾಗಲೇ, ಯಾರೋ ನನ್ನ ನೋಡುತ್ತಿದ್ದರೆ ಅಂತ ಅನ್ನಿಸೊಕೆ ಶುರುವಾಯ್ತು, ಇದೇ ಪರಿಸ್ಥಿತಿ ಚೆನ್ನಾಗಿರುವ ರಸ್ತೆಯಲ್ಲಿ ಬಂದಿದ್ದರೆ ವೇಗವಾಗಿ ಬೈಕ್ ಓಡಿಸಿಕೊಂಡು ಹೋಗಿ ಬಿಡುತ್ತಿದ್ದೆ ಆದರೆ ಈಗ ರಸ್ತೆ ಚೆನ್ನಾಗಿಲ್ಲ ಅಂತ ಸಂಪೂರ್ಣವಾಗಿ ಬೈಕ್ ನಿಲ್ಲಿಸಿ ಯಾರೂ ಅಂತ ನೋಡೋಣ ಎನ್ನುವಾಗಲೇ ಬೈಕ್ ಮುಂದೆಯೇ ಕತ್ತಲ ಆಕೃತಿ ಒಂದು ರಪ್ ಪಾಸ್ ಆಯ್ತು!
ಯಾವುದೋ ಕಾಡಹಂದಿ ಇರಬೇಕು ಅಂತ ತನಗೆ ತಾನೇ ಅಂದುಕೊಳ್ಳುತ್ತಾ ಇಲ್ಲಿಂದ ಮೊದಲು ಜಾಗ ಖಾಲಿ ಮಾಡಿದರೆ ಒಳ್ಳೆಯದು ಅಂತ ಅಲ್ಲಿಂದ ಹೇಗೆ ಹೊರಟ.
ಮತ್ತೆ ಸ್ವಲ್ಪ ದೂರ ಹೋದ ನಂತರ ಸಧ್ಯ ಆ ಸಮಯದಲ್ಲಿ ಬೈಕ್ ಆಫ್ ಆಗಲಿಲ್ಲ, ಅಂದುಕೊಳ್ಳುವಾಗಲೇ ಬೈಕ್ ಏನಾದ್ರೂ ಕೈ ಕೊಟ್ರೆ ಎನ್ನುವ ಯೋಚನೆ ಬೇಡವೆಂದರೂ ಅವನ ತಲೆಗೆ ಬಂದೆ ಬಿಡ್ತು, ಗಗನ್ ಆ ರೀತಿ ಯೋಚಿಸಿದ ಕೆಲವೇ ಕ್ಷಣದಲ್ಲಿ ಬೈಕ್ ಕೆಟ್ಟು ನಿಂತಿತು!
ಬೈಕ್ ಸ್ಟಾರ್ಟ್ ಆಗಲಿ ಅಂತ ಏನೇನೋ ಹರಸಾಹಸ ಮಾಡಿದರು ಬೈಕ್ ಸ್ಟಾರ್ಟ್ ಆಗ್ತಾಯಿಲ್ಲ, ತನ್ನ ಕಾಲು ನೋವು ಬಂದ್ರು ಪರವಾಗಿಲ್ಲ ಅಂತ ಜೋರಾಗಿ ಕಷ್ಟಪಟ್ಟು ಅನೇಕ ಬಾರಿ ಬೈಕ್ ಕಿಕ್ಕರ್ ಹೊಡೆದು ಸುಸ್ತಾಗಿ, ಕೊನೆಗೆ ಇದು ಇವತ್ತು ಸ್ಟಾರ್ಟ್ ಆಗಲ್ಲ ಅನ್ನೋ ತೀರ್ಮಾನಕ್ಕೆ ಬಂದು, ಬೈಕ್ ನ ಅಲ್ಲಿಯೇ ಇದ್ದ ಒಂದು ದೊಡ್ಡ ಮರದ ಬಳಿ ನಿಲ್ಲಿಸಿ ಲಾಕ್ ಮಾಡಿ, ಬ್ಯಾಗ್ ತೆಗೆದುಕೊಂಡು ಮೊಬೈಲ್ ನಲ್ಲಿ ನೆಟ್ವರ್ಕ್ ಚೆಕ್ ಮಾಡಿ, ಈ ಕಾಡಿನಲ್ಲಿ ಯಾವ ನೆಟ್ವರ್ಕ್ಕೂ ಸಿಗಲ್ಲ ಅಂತ ಗೊತ್ತಿದ್ರು ಚೆಕ್ ಮಾಡ್ತಿದ್ದಿನಲ್ಲ ಅಂತ ಅವನೇ ಹೇಳಿಕೊಳ್ಳುತ್ತಾ ಮೊಬೈಲ್ ಫ್ಲ್ಯಾಶ್ ಲೈಟ್ನಲ್ಲಿ ನಡೆಯಲು ಮುಂದಾದ....
ಹಾಗೇ ಸ್ವಲ್ಪ ದೂರ ನಡೆದವನಿಗೆ ಯಾಕೋ ತಾನು ದಾರಿ ತಪ್ಪಿ ಮತ್ತೆ ಮತ್ತೆ ಅದೇ ಜಾಗದಲ್ಲಿಯೇ ಸುತ್ತುತ್ತಿದ್ದೇನೆ ಅನ್ನಿಸಿ ಕ್ರಾಸ್ಚೆಕ್ ಮಾಡಿದಾಗ ಹೌದು ನಿಜ ಎನ್ನುವಂತೆ ಭ್ರಮೆ ಉಂಟಾಯ್ತು!
ಅಷ್ಟರಲ್ಲಿಯೇ ಇನ್ನೇನೋ ತನ್ನ ಮೊಬೈಲ್ ಬ್ಯಾಟರಿ ಡೆಡ್ ಆಗುತ್ತದೆ ಅಂತ ಹೇಳುತ್ತಿದ್ದಂತೆ ಮೊಬೈಲ್ ಸಹ ಸ್ವಿಚ್ಆಫ್ ಆಯ್ತು!
ಈಗ ಗಗನ್ ಗೆ ಒಂದು ವಿಷಯ ಮನವರಿಕೆ ಆಯ್ತು, ಹೌದು ನಾನು ಈ ದಟ್ಟವಾದ ಕಾಡು ಪ್ರವೇಶ ಮಾಡಿದಾಗಲಿಂದಲೂ ನಾನು ಏನು ಯೋಚಿಸುತ್ತಿದ್ದೇನೆ ಅದೇ ನಡೆಯುತ್ತಿದೆ! ಅದಕ್ಕೆ ಪೂರಕವಾಗಿ ಹಿಂದೆ ನಡೆದ ಘಟನೆಗಳನ್ನು ಒಂದೊಂದೇ ನೆನಸಿಕೊಂಡು ಯೋಚಿಸಿದಾಗ ಇದು 100% ಸತ್ಯ ಅಂತ ಗೊತ್ತಾಗ್ತಾಯಿದೆ.
ಈಗ ನಾನು ನನ್ನ ಯೋಚನೆಯನ್ನು ಬಹಳ ಜಾಗರೂಕತೆಯಿಂದ ಸಕಾರಾತ್ಮಕವಾಗಿ ಯೋಚಿಸಿ ನಾನು ಹೋಗಬೇಕಾದ ಜಾಗವನ್ನು ತಲುಪಬೇಕು ಎಂಬ ನಿರ್ಣಯಕ್ಕೆ ಬರುತ್ತಾನೆ.
ಈಗ ನಾನು ತಲುಪಬೇಕಾದ ಜಾಗಕ್ಕೆ ಹೋಗುತ್ತಿದ್ದೀನಿ ಅಂತ ಸಕಾರಾತ್ಮಕವಾಗಿ ಯೋಚಿಸುತ್ತಾನೆ, ಮತ್ತು ಕೆಲವು ನಿಮಿಷಗಳ ಬಳಿಕ ಚಂದ್ರನ ಬೆಳದಿಂಗಳ ಬೆಳಕಿನಲ್ಲಿ ನಡೆದರು ತಾನು ತಲುಪಬೇಕಾದ ಗಮ್ಯ ಸಿಕ್ಕದೆ ಇದ್ದಾಗಲೇ, ಬೈಕ್ ಕಿಕ್ಕರ್ ಹೊಡೆದು ಹೊಡೆದು ಈಗ ಆ ಕಾಲು ನೋವುದಕ್ಕೆ ಪ್ರಾರಂಭವಾಗುತ್ತದೆ.
ಅದೇ ನೋವಿನಲ್ಲಿ ನಡೆಯುತ್ತಿರುವ ಗಗನ್ ಗೆ ತನ್ನ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ತನ್ನ ಸ್ನೇಹಿತರು ನಾನು ಬೆಂಗಳೂರಿನಿಂದ ಹೊರಟಿರುವುದೇ ಸುಳ್ಳು ಅಂತ ಬಾವಿಸಬಹುದು ಎಂದುಕೊಳ್ಳುತ್ತಾನೆ.
ಗಗನ್ ಮೊಬೈಲ್ ಸ್ವಿಚ್ಆಫ್ ಆಗಿರುವುದರಿಂದ ನವೀನ್ ಗಾಭರಿಯಾಗಿ ಕಳವಳದಲ್ಲಿ ಇದ್ರೆ ಸ್ವಾಮಿ, "ನೋಡೋ ಅವನು ಬೆಂಗಳೂರಿಂದ ಹೊರಟೆ ಇಲ್ಲ! ನೀನು ಸುಮ್ಮನೆ ಟೆನ್ಷನ್ ಮಾಡ್ಕೋಬೇಡ, ಅದಕ್ಕೆ ಅವನು ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿದ್ದಾನೆ..." ಅಂತ ಅವನಿಗೆ ಧೈರ್ಯ ಹೇಳಿದ.
ಕಾಡಿನ ಶುದ್ಧ ಗಾಳಿ ಉಸಿರು ಕಟ್ಟಿಸುತ್ತಿದೆ ಅನ್ನುವ ಹಾಗೇ ಕಷ್ಟದಲ್ಲಿ ಹೆಜ್ಜೆ ಹಾಕುತ್ತಿದರೆ ಒಣಗಿದ ತರಗೆಲೆಗಳ ಸದ್ದು ಗಗನ್ ಗೆ ಬೇಡವೆಂದರು ಹತ್ತಿರದಲ್ಲಿ ಯಾವುದೋ ಕಾಡು ಪ್ರಾಣಿ ಇರುವಂತೆ ಭಾಸವಾಗಿ, ಮೆಲ್ಲಗೆ ಪಕ್ಕದಲ್ಲಿಯೇ ಇದ್ದ ಒಂದು ಮರದ ಮರೆಯಲ್ಲಿ ಅವಿತುಕೊಂಡ!
ಹಠಾತ್ ನಿಶಬ್ಧ ರಕ್ತ ಹೆಪ್ಪುಗಟ್ಟುತ್ತಿದೆ ಎನ್ನಿಸುವಷ್ಟು ನೀರವಮೌನದಲ್ಲಿ ಇರುವಾಗಲೇ ಕಾಡು ಪ್ರಾಣಿಯೊಂದು ಜೋರಾಗಿ ಕೂಗಿದ ಸದ್ದು! ಯಾವ ಪ್ರಾಣಿ ಅದು? ಹುಲಿಯೋ? ಚಿರತೆಯೋ? ಭಯದಲ್ಲಿ ಅವನ ಹೃದಯ ಬಡಿತ ಅವನಿಗೆ ಕೇಳಿಸುವಷ್ಟು ಜೋರಾಗುತ್ತಿದ್ದಾರೆ, ಆ ಪ್ರಾಣಿ ತರಗೆಲೆಯ ಮೇಲೆ ನಡೆಯುತ್ತಿರುವ ಸದ್ದು ನಿಧಾನವಾಗಿ ಕಡಿಮೆ ಆಗುತ್ತಿದೆ!
ಸಧ್ಯ ಬದುಕಿತು ಬಡಜೀವ ಎಂದುಕೊಳ್ಳುತ್ತಾ, ಆದಷ್ಟು ಬೇಗ ಮರ ಹತ್ತಿ ಮೇಲೆ ಕುಳಿತುಕೊಳ್ಳುವುದೇ ಒಳ್ಳೆಯದು ಅಂತ ಮರ ಹತ್ತೋಕೆ ಶುರು ಮಾಡಿದ, ಮನುಜ ಸಹಜ ಬುದ್ಧಿ ಬೇಡವೆಂದರೂ, "ಮರದಿಂದ ಬಿದ್ರೆ ಕಷ್ಟ!" ಅಂತ ಹೇಳಿಕೊಂಡು ಮರ ಹತ್ತಿ ಕುಳಿತ ಮೇಲೆ ತಾನು ಮಾಡಿದ ತಪ್ಪಿನ ಅರಿವಾದರೂ ಸಧ್ಯ ಬೀಳಲಿಲ್ಲ ಅಂತ ಮತ್ತೆ ಸಮಾಧಾನ ಮಾಡಿಕೊಂಡ.
ಮರ ಹತ್ತಿದರು ತಲೆಯಲ್ಲಿ ಆಲೋಚನೆಗಳು ನಿಂತಿಲ್ಲ ಅವುಗಳನ್ನು ನಿಯಂತ್ರಿಸಬೇಕೆ ಅಥವಾ ಬೇಡವೆ? ಎನ್ನುವ ಮನಸ್ಸು ಮತ್ತು ಬುದ್ಧಿಯ ಗುದ್ದಾಟಕ್ಕೆ ತಲೆ ಬಿಸಿಯಾಗಿ, ಕಣ್ಣು ಮುಚ್ಚಿಕೊಂಡು "ಬೆಳಿಗ್ಗೆ ಆಗುವಷ್ಟರಲ್ಲಿ ನಾನು ಸೇರಬೇಕಾದ ಡೆಸ್ಟಿನೇಷನ್ ತಲುಪಿದರೆ ಸಾಕು...." ಎನ್ನುವುದನ್ನೇ ಪದೇ ಪದೇ ಹೇಳುತ್ತಾ ತಲೆ ತಿರುಗಿ ಮರದಿಂದ ಬಿದ್ದ!
ಮಸುಕಾದ ಮುಂಜಾನೆ, ಇನ್ನು ಸೂರ್ಯ ಸ್ಪಷ್ಟವಾಗಿ ಗೋಚರವಾಗಿಲ್ಲ, ನವೀನ್ ಮತ್ತು ಸ್ನೇಹಿತ ಟ್ರಕ್ಕಿಂಗ್ ಗೆ ಹೊರಡಲು ತೋಟದ ಮನೆಯಿಂದ ಹೊರಗೆ ಬರುತ್ತಾರೆ, ಸ್ವಲ್ಪ ದೂರದಲ್ಲಿ ಗಗನ್ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಾಣಿಸುತ್ತದೆ, ಎಲ್ಲರೂ ಗಾಬರಿಯಿಂದ ಓಡಿ ಬಂದು ಗಗನ್ ನ ಎಚ್ಚರಿಸುತ್ತಾರೆ.
ಕಣ್ಣುಬಿಟ್ಟ ಗಗನ್ ಮುಂದೆ ಅವನ ಸ್ನೇಹಿತರಿದ್ದಾರೆ ಸುತ್ತಲೂ ಕಣ್ಣಾಡಿಸಿದರೆ, ದೂರದಲ್ಲಿ ಇವನ ಬೈಕ್ ನಿಂತಿದೆ! ಇದೇನು ಆಶ್ಚರ್ಯ ಎಲ್ಲೋ ನಿಲ್ಲಿಸಿದ ಬೈಕ್ ಇಲ್ಲಿಗೆ ಹೇಗೆ ಬಂತು, ನಾನು ಇಲ್ಲಿಗೆ ಹೇಗೆ ಬಂದೆ! ಅಂತ ತನಗೆ ತಾನೇ ಪ್ರಶ್ನೆಗಳನ್ನು ಕೇಳಿಕೊಳ್ಳುವವನಿಗೆ, ಸ್ನೇಹಿತರು ಕೇಳುತ್ತಿರುವ ಪ್ರಶ್ನೆಗಳು ಪ್ರಶ್ನೆಗಳೇ ಅಲ್ಲ ಅಂತ ಅನ್ನಿಸುತ್ತಿದೆ!
ನವೀನ್ ನೀರು ಕುಡಿಸಿದ ಮೇಲೆ, ಸುಧಾರಿಸಿಕೊಂಡು ಗಗನ್ ಹೇಳಿದ "ನಡೀರಿ ಎಲ್ಲಾ ಟ್ರಕ್ಕಿಂಗ್ ಮಾಡೋಣ!" ಅಂತ
"ಯದ್ ಭಾವಂ ತದ್ ಭವತಿ" ನಾವು ಏನೂ ಯೋಚಿಸುತ್ತೇವೋ ಅದೇ ಆಗುತ್ತೇವೆ... ಅದೇ ಆಗುತ್ತದೆ.... ಇದು ಮೇಲ್ನೋಟಕ್ಕೆ ಸರಳ ಎನ್ನಿಸಿದರೂ ಪ್ರಪಂಚದ ಎಲ್ಲಾ ಒಳ್ಳೆಯದಕ್ಕೂ ಮತ್ತು ಕೆಟ್ಟದಕ್ಕೂ ನಮ್ಮ ಆಲೋಚನೆಯೇ ಮೂಲಕ ಕಾರಣ!
ನನ್ನ ಅಂತರಂಗದ ಯುದ್ಧ ನನ್ನನ್ನು ಸೋಲಿಸಿ ಗೆಲ್ಲಿಸಿ ಇಲ್ಲಿಗೆ ಕರೆದುಕೊಂಡು ಬಂದಿದೆ, ಇನ್ನು ಮುಂದೆ ನನ್ನ ಆಲೋಚನೆಗಳ ಮೇಲೆ ನಾನು ನಿಯಂತ್ರಣ ಸಾಧಿಸುತ್ತಾನೆ...... ಎಂದು ಬೆಟ್ಟದ ತುದಿಯಲ್ಲಿ ಸ್ನೇಹಿತರ ಜೊತೆಗೆ ನಿಂತು ಸೂರ್ಯೋದಯವನ್ನು ನೋಡುತ್ತಾ ಗಗನ್ ಪ್ರಕೃತಿಗೆ ನಮಿಸುತ್ತಾನೆ.
By MadhuKeerthi C M

Good and Nice story
Good
Nice story
Good
Good