ನಾತಿಚರಾಮಿ - By Bindu u
Written By: Bindu u
Category: Short story
Competition: Poetry and Creative Writing Competition 2026
In the poignant short story "ನಾತಿಚರಾಮಿ," Bindu u presents a narrative that delves deeply into the complexities of familial expectations and personal dilemmas. As part of the Short Story category, this compelling submission is featured in the Poetry and Creative Writing Competition 2026 by Hashtag Kalakar. The story unfolds the emotional journey of its protagonist, exploring themes of betrayal, societal pressure, and the quest for personal freedom.
About the Work
"ನಾತಿಚರಾಮಿ" is a thought-provoking tale that captures the emotional turmoil of its protagonist, Maithili. Through vivid imagery and a compelling narrative style, Bindu u explores themes of trust, societal expectations, and personal liberation. The story is rich in emotional depth, capturing the protagonist's struggle with her imposed reality and the courage it takes to seek a new path.
ನಾತಿಚರಾಮಿ
Original Submission by Bindu u
ನಾತಿಚರಾಮಿ ( ಸಣ್ಣ ಕಥೆ )
" ಅಣ್ಣ, ಅತ್ತಿಗೆ, ಮಾವ ಎಲ್ಲರೂ ಸೇರಿ ಮೋಸ ಮಾಡಿ ಬಿಟ್ಟರು ಧನು. ಅಂದು ನಡೆದದ್ದು ಮದುವೆಯಲ್ಲ, ನಂಬಿಕೆ ದ್ರೋಹ. ಎಲ್ಲವನ್ನೂ ಮುಚ್ಚಿಟ್ಟು ಅನಿಕೇತನನ್ನು ನನಗೆ ಕಟ್ಟಿದರು. ಮದುವೆಯಾದ ದಿನದಿಂದ ಸಂಸಾರವೆಂದರೆ ಬಲವಂತದ ಮಾಘ ಸ್ನಾನವಾಗಿದೆ." ಮೈಥಿಲಿ ತನ್ನ ಕಷ್ಟಗಳನ್ನು ಬಾಲ್ಯದ ಸ್ನೇಹಿತ ಧನುಷ್ ಹತ್ತಿರ ಹೇಳಿಕೊಂಡಿದ್ದಳು. ಧನುಷ್ ಒಮ್ಮೆ ಮೈಥಿಲಿಯನ್ನೇ ದಿಟ್ಟಿಸಿದ. ಪಟಪಟನೆ ಮಾತನಾಡುತ್ತ, ಉತ್ಸಾಹದ ಚಿಲುಮೆಯಂತಿದ್ದ ಮೈಥಿಲಿ ಈಗ ಸೊರಗಿ ಹೋಗಿರುವುದನ್ನು ನೋಡಿ ಧನುಷ್ ನ ಮನಸಿಗೆ ತುಂಬಾ ನೋವಾಯಿತು.
" ಒಲ್ಲದ ಗಂಡ, ಸಲ್ಲದ ಸಂಸಾರ.. ಇದರಲ್ಲೇ ಇನ್ನೆಷ್ಟು ದಿನ ಹೆಣಗಾಡುವೆ ಮೈಥಿಲಿ. ಬಂದು ಬಿಡು ಹೊರಗೆ. ಪ್ರಪಂಚ ವಿಶಾಲವಾಗಿದೆ. ನೀನು ಓದಿಕೊಂಡಿರುವವಳು.‌ ಒಳ್ಳೆಯ ಕೆಲಸ ಸಿಗುವುದು ಕಷ್ಟದ ಮಾತಲ್ಲ. ಸ್ವತಂತ್ರಳಾಗಿ ಯಾರ ಹಂಗೂ ಇಲ್ಲದೆ ಬದುಕಬಹುದು. ಗೆಳೆಯನಾಗಿ ನಾನು ನಿನಗೆ ಬೆಂಬಲವಾಗಿರುವೆ" ಧೈರ್ಯ ತುಂಬಿದ್ದ ಧನುಷ್.
" ಹೊತ್ತಾಯಿತು. ನಾನಿನ್ನು ಹೊರಡುತ್ತೇನೆ " ಎಂದಷ್ಟೇ ಹೇಳಿ ಮೈಥಿಲಿ ತನ್ನ ಮನೆಯೆಡೆಗೆ ಹೊರಟಿದ್ದಳು.
ಮನೆಗೆ ಬಂದು ರೂಮಿನೊಳಗೆ ಕಾಲಿಡುತ್ತಲೇ ಮತ್ತದೇ ದುರ್ನಾತ, ಮೈಥಿಲಿಯ ಮೂಗಿಗೆ ಬಂದು ಬಡಿಯಿತು. ಕುಡಿದ ಅಮಲಿನಲ್ಲಿ ಅನಿಕೇತ್ ಮಂಚದ ಮೇಲೆ ಮಲಗಿದ್ದ. ಅಲ್ಲಲ್ಲಿ ಬಿದ್ದು ಚೆಲ್ಲಾಪಿಲ್ಲಿಯಾಗಿದ್ದ ಸಾಮಾನುಗಳು ರೂಮಿನ ತುಂಬಾ ಹರಡಿಕೊಂಡಿದ್ದವು. " ಪ್ರತಿ ದಿನ ಇದೇ ಹಣೆಬರಹ " ಎಂದುಕೊಳ್ಳುತ್ತ, ಫ್ರೆಶ್ ಆಗಿ ಬಂದು ದಿಂಬಿಗೆ ತಲೆಕೊಟ್ಟು ಮಲಗಿದಳು ಮೈಥಿಲಿ. " ಒಲ್ಲದ ಸಂಸಾರದಿಂದ ಹೊರಗೆ ಬಂದು ಬಿಡು ಮೈಥಿಲಿ " ಎಂದು ಧನುಷ್ ಹೇಳಿದ ಮಾತುಗಳೇ ಮೈಥಿಲಿಯ ಮನಸನ್ನು ಕೊರೆಯುತ್ತಿತ್ತು.
ಮೈಥಿಲಿ ಮಧ್ಯವ ವರ್ಗದ ಕುಟುಂಬದಿಂದ ಬಂದ ಹೆಣ್ಣು. ಹುಟ್ಟುತ್ತಲೇ ತಾಯಿಯನ್ನು, ಕಾಲೇಜಿನಲ್ಲಿರುವಾಗ ತಂದೆಯನ್ನು ಕಳೆದುಕೊಂಡಿದ್ದಳು. ಅಣ್ಣ ಮಹೇಶನ ಮನೆಯಲ್ಲಿದ್ದುಕೊಂಡು ಪದವಿ ಓದುತ್ತಿದ್ದಳು. ಕಾಲೇಜು ಮುಗಿಯುತ್ತಲೇ, ಎಸ್. ಕೆ ಇಂಡಸ್ಟ್ರೀಸ್ ನ ಮಾಲೀಕರಾದ ನಂದಗೋಪಾಲರ ಮಗ ಅನಿಕೇತನ ಸಂಬಂಧ ಮೈಥಿಲಿಯನ್ನು ಹುಡುಕಿಕೊಂಡು ಬಂದಿತ್ತು. ಹುಡುಗ ರೂಪವಂತ, ಕುಬೇರನ ಮೊಮ್ಮಗನೇ ಏನೋ ಎನ್ನವಷ್ಟು ಹಣವಂತ. ಇಂಥಹ ಸಂಬಂಧ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿದೆಯೆಂದರೆ ನಮ್ಮ ಪುಣ್ಯವೇ ಸರಿ..!! ಎಂದುಕೊಂಡ ಮಹೇಶ ಹಿಂದೂ ಮುಂದೂ ವಿಚಾರಿಸದೆ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದ್ದ. ಆಗಷ್ಟೇ ಓದು ಮುಗಿಸಿದ್ದ ಮೈಥಿಲಿಗೆ ಪ್ರಪಂಚ ಜ್ಞಾನ ಅಷ್ಟೊಂದು ಇರಲಿಲ್ಲ.
" ತುಂಬಾ ಒಳ್ಳೆಯ ಸಂಬಂಧ ಮೈಥಿಲಿ. ನಿನ್ನ ಭಾಗ್ಯವೇ ಖುಲಾಯಿಸಿತು ಬಿಡು. ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳಬಹುದು. ಹುಡುಗ ರಾಜಕುಮಾರನಂತಿರುವನು " ಎಂದು ಮಹೇಶನ ಹೆಂಡತಿ ಸಹನಾ ಮೈಥಿಲಿಯನ್ನು ಮದುವೆಗೆ ಒಪ್ಪಿಸಿದ್ದಳು. ಅಣ್ಣ, ಅತ್ತಿಗೆಯ ಒತ್ತಾಸೆಯಂತೆ ಮೈಥಿಲಿ ಅನಿಕೇತನ ಕೈ‌ಹಿಡಿದಿದ್ದಳು. ಮದುವೆಯ ಖರ್ಚನ್ನೂ ನಂದಗೋಪಾಲರೇ ವಹಿಸಿಕೊಂಡಿದ್ದರು. ಸ್ವರ್ಗವೇ ಧರೆಗಿಳಿದು ಬಂದಿದೆಯೇನೋ ಎನ್ನುವಂತೆ‌ ಅದ್ಧೂರಿಯಾಗಿ ಮದುವೆ ನೆರವೇರಿತ್ತು. ಹೊಸ ಬಾಳ ಹೊಸ್ತಿಲಿಗೆ ನಸು ನಗುತ ಕಾಲಿಟ್ಟ ಮೈಥಿಲಿ ಭಾವನಾ ಲೋಕದಲ್ಲಿ ತೇಲುತ್ತಿದ್ದಳು. ತನ್ನ ಸಂಸಾರದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದಳು. ಆದರೆ ಮೊದಲ ರಾತ್ರಿಯೇ, ಅವಳ ಆಶಾಗೋಪುರ ನೆಲಕ್ಕಪ್ಪಳಿಸಿತ್ತು. ಕೈಯಲ್ಲಿ ಬಾಟಲಿ ಹಿಡಿದುಕೊಂಡು, ಕುಡಿದ ಅಮಲಿನಲ್ಲೇ ರೂಮಿನೊಳಗೆ ಕಾಲಿಟ್ಟಿದ್ದ ಅನಿಕೇತ್. ಅನಿಕೇತನ ಈ ಅವತಾರ ನೋಡಿ ಮೈಥಿಲಿ ಗಾಬರಿಯಾಗಿ ಹೋಗಿದ್ದಳು. ಆದರೆ ಅದು ಕೇವಲ ಆರಂಭವಾಗಿತ್ತು.‌ ಮೈಥಿಲಿ ಎದುರಿಸಬೇಕಾದ ಸಂಕಷ್ಟಗಳಿನ್ನೂ ಸಾಕಷ್ಟಿದ್ದವು.
ಅನಿಕೇತ್ ನಂದಗೋಪಾಲರ ಏಕ ಮಾತ್ರ ಪುತ್ರ. ಚಿಕ್ಕ ವಯಸ್ಸಿನಲ್ಲಿರುವಾಗಲೇ ತನ್ನ ತಾಯಿಯನ್ನು ಕಳೆದುಕೊಂಡಿದ್ದ. ವಸುಂಧರಾರನ್ನು ನಂದಗೋಪಾಲರು ಎರಡನೇ ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದರು. ವಸುಂಧರ ಕೆಟ್ಟವರೇನೂ ಆಗಿರಲಿಲ್ಲ. ಆದರೆ ಅನಿಕೇತನಿಗೆ ತಾಯಿ ಸ್ಥಾನ ತುಂಬುವುದರಲ್ಲಿ ಮಾತ್ರ ಸೋತಿದ್ದರು. ಅನಿಕೇತ್ ಸಣ್ಣ ವಯಸ್ಸಿನಲ್ಲಿದ್ದಾಗ ಓದಿನಲ್ಲಿ ಮುಂದಿದ್ದು, ಚೂಟಿಯಾಗಿದ್ದ. ಆದರೆ ಬೆಳೆಯುತ್ತ ಅವನ ಜೀವನ ಸೂತ್ರವಿರದ ಗಾಳಿಪಟದಂತಾಗಿ ಹೋಗಿತ್ತು. ಎಲ್ಲ ದುಶ್ಚಟಗಳೂ ಅವನ ಮೈಗಂಟಿಕೊಂಡು ಬಿಟ್ಟಿದ್ದವು. ಅದಕ್ಕೆ ಸರಿಯಾಗಿ ಅವನ ಕೆಲವು ಸ್ನೇಹಿತರು, ಅನಿಕೇತ್ ಕೆಟ್ಟ ಹಾದಿ ಹಿಡಿಯುವಂತೆ ಪ್ರೋತ್ಸಾಹಿಸಿದ್ದರು. ಮನೆಯಲ್ಲಿ ನಂದಗೋಪಾಲರು ತಮ್ಮ ವ್ಯವಹಾರದಲ್ಲೇ ಸಂಪೂರ್ಣವಾಗಿ ತೊಡಗಿಕೊಂಡಿದ್ದರೆ, ವಸುಂಧರಾ ತಮ್ಮದೇ ಲೋಕದಲ್ಲಿದ್ದರು. ಒಟ್ಟಿನಲ್ಲಿ ಅನಿಕೇತ್ ಅಂತೂ ಸಂಪೂರ್ಣವಾಗಿ ದಾರಿ ತಪ್ಪಿ ಹೋಗಿದ್ದ. ಅನಿಕೇತ್ ತನ್ನ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿ, ಕುಡಿತದ ದಾಸನಾಗಿ ಮನೆಯಲ್ಲಿಯೇ ಮೂರು ಹೊತ್ತೂ ಕುಡಿದುಕೊಂಡು ಬಿದ್ದಾಗಲೇ‌ ನಂದಗೋಪಾಲರಿಗೆ ವಾಸ್ತವದ ಅರಿವಾಗಿತ್ತು. ಮಗ ಕೈತಪ್ಪಿ ಹೋಗಿದ್ದಾನೆ, ಇಷ್ಟು ದೊಡ್ಡ ಎಸ್.ಕೆ ಇಂಡಸ್ಟ್ರೀಸ್ ನ ಮಾಲೀಕರಾದ ನಂದಗೋಪಾಲರ ಮಗ, ಹೀಗೆ ಕುಡುಕನಾಗಿದ್ದಾನೆ ಎಂದು ಸಮಾಜಕ್ಕೆ ಗೊತ್ತಾದರೆ ತನ್ನ ಪ್ರತಿಷ್ಠೆಗೇ ಪೆಟ್ಟು. ಇವನನ್ನು ಹೇಗಾದರೂ ಸರಿ ದಾರಿಗೆ ತರಬೇಕು ಎಂದುಕೊಂಡ ನಂದಗೋಪಾಲರಿಗೆ ಹೊಳೆದ‌ ಸುಲಭೋಪಾಯವೇ ಅನಿಕೇತನ ಮದುವೆ. ಇವನಿಗೊಂದು ಮದುವೆ ಮಾಡಿದರೆ, ಜವಾಬ್ದಾರಿ ಬಂದಾದರೂ ಬದಲಾಗಬಹುದು ಎಂಬುದು ನಂದಗೋಪಾಲರ ಯೋಚನೆಯಾಗಿತ್ತು. ಬಡ ಕುಟುಂಬದ ಹೆಣ್ಣನ್ನು ತಂದರೆ, ಅವಳು ಇವನೊಂದಿಗೆ ಹೊಂದಿಕೊಂಡು ಹೋಗುತ್ತಾಳೆ, ಶ್ರೀಮಂತ ಮನೆಯ ಹೆಣ್ಣಾದರೆ ನಾವು ಹೇಳುವ ಹಾಗೆ ಕೇಳುವುದು ಕಷ್ಟ , ಆ ಕಾರಣದಿಂದಲೇ ಮೈಥಿಲಿಯನ್ನು ಅನಿಕೇತನಿಗೆ ಕೇಳಿದ್ದರು ನಂದಗೋಪಾಲರು. ತಂದೆ, ತಾಯಿ ಇಲ್ಲದ ಹುಡುಗಿ.‌ ಮಧ್ಯಮ ವರ್ಗದವಳು. ನಮ್ಮ ಅನಿಕೇತನನ್ನು ಸಹಿಸಿಕೊಂಡು ಹೋಗಲು ಇವಳೇ ಸರಿ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಲೆಕ್ಕಾಚಾರ ತಪ್ಪಿ ಎಲ್ಲವೂ ಅಡಿಮೇಲಾಗಿ ಹೋಯಿತು. ಇವೆಲ್ಲವೂ ಒಂದೊಂದಾಗಿ ಮೈಥಿಲಿಗೆ ಅರಿವಾಗುತ್ತ ಹೋಯಿತು. ಆದರೆ ಅಷ್ಟರೊಳಗಾಗಲೇ ಮೈಥಿಲಿ ಅನಿಕೇತನ ಮಡದಿಯಾಗಿದ್ದಳು. ಆ ದೊಡ್ಡ ಮನೆಯ ಸೊಸೆಯಾಗಿದ್ದಳು. ಕುಡಿತದ ಅಮಲಿನಲ್ಲಿದ್ದಾಗ ಅನಿಕೇತ್ ಏನು ಮಾಡುತ್ತಿದ್ದನೋ ಅವನಿಗೇ ತಿಳಿಯುತ್ತಿರಲಿಲ್ಲ. ಅದ್ಯಾವುದೋ ಸಿಟ್ಟು, ಹೇಳಿಕೊಳ್ಳಲಾಗದಂಥಹ ನೋವು ಸುಪ್ತವಾಗಿ ಅವನೆದೆಯಲ್ಲಿದ್ದದ್ದು, ಕುಡಿದಾಗ ಹೊರಬಂದು ಆರ್ಭಟಿಸುತ್ತಿತ್ತು. ಏನೇನೋ ಮಾತುಗಳು, ಎಲ್ಲರ ಮೇಲೆ ಕಿರುಚಾಟ, ಹೀಗೆ ಅನಿಕೇತನ ನಡವಳಿಕೆಯೇ ಮೈಥಿಲಿಗೆ ಅರ್ಥವಾಗುತ್ತಿರಲಿಲ್ಲ. ಸಂಭಾಳಿಸಲಂತೂ ಮೊದಲೇ ಆಗುತ್ತಿರಲಿಲ್ಲ. ಒಟ್ಟಿನಲ್ಲಿ ಮೈಥಿಲಿಯ ಜೀವನವಂತೂ ಹಾಳಾಗಿ ಹೋಗಿತ್ತು.
" ನಿಮ್ಮ ಮಗ ಇಂಥವನೆಂದು ಮುಚ್ಚಿಟ್ಟು ನನಗೆ ಯಾಕೆ ಗಂಟು ಹಾಕಿದಿರಿ. ನನ್ನ ಜೀವನವನ್ನೇಕೆ ಹಾಳು ಮಾಡಿದಿರಿ " ಎಂದು ಮೈಥಿಲಿ ನಂದಗೋಪಾಲರ ಬಳಿ ಸಾಕಷ್ಟು ಬಾರಿ ಕೇಳಿದ್ದಳು.
" ಅನಿಕೇತ್ ತಾಯಿಯಿಲ್ಲದೆ ಬೆಳೆದ‌ ಹುಡುಗ. ದುಶ್ಚಟಗಳಿಗೆ ಬಲಿಯಾಗಿ ಕೆಟ್ಟ ದಾರಿ ಹಿಡಿದುಬಿಟ್ಟ. ಅವನನ್ನು ತಿದ್ದಲು ನಾನು ತುಂಬಾ ಪ್ರಯತ್ನಿಸಿದೆ. ಆದರೆ ಪ್ರಯೋಜನವಾಗಲಿಲ್ಲ. ಮದುವೆಯಾದರಾದರೂ ಸರಿ ಹೋಗುತ್ತಾನೆ ಎನ್ನುವ ಆಸೆಗೆ ಅವನಿಗೆ ಮದುವೆ ಮಾಡಿದೆವಮ್ಮ. ಆದರೆ ಹೀಗಾಗುವುದೆಂದು ತಿಳಿದಿರಲಿಲ್ಲ " ಎಂದು ನಂದಗೋಪಾಲರು ಸಮಜಾಯಿಷಿ ಕೊಡುತ್ತಿದ್ದರು. ನಂದಗೋಪಾಲರು ಕೊಟ್ಟ ಯಾವ ಕಾರಣಗಳೂ ಮೈಥಿಲಿಗೆ ಸಮಂಜಸವೆನ್ನಿಸಲಿಲ್ಲ. ತಾಯಿ ಇಲ್ಲದ ಮಕ್ಕಳೆಲ್ಲರೂ ಹೀಗೆ ತಪ್ಪು ದಾರಿ ಹಿಡಿಯುವರೇ..!! ತಂದೆಯಾಗಿ ಇವರು ಮಗನನ್ನು ಸರಿ ದಾರಿಗೆ ತರಬೇಕಿತ್ತಲ್ಲವೇ..!! ನಾನೂ ತಾಯಿಯಿಲ್ಲದೇ ಬೆಳೆದವಳು. ಮದುವೆಯಾದರೆ ಸರಿ ಹೋಗುವನೆಂದು ಇವರೇ ಊಹಿಸಿಕೊಂಡು, ಅನಿಕೇತನನ್ನು ನನಗೆ ಕಟ್ಟಿ ನನ್ನ ಜೀವನವನ್ನೇಕೆ ಹಾಳು ಮಾಡಿದರು...!! ಹೀಗೆ ಮೈಥಿಲಿಯ ಅಸಮಾಧಾನಗಳಿಗೆ ಉತ್ತರ ದೊರಕಿರಲಿಲ್ಲ.
ಆದರೆ‌ ಒಮ್ಮೆ ವಸುಂಧರಾರವರು
" ನಿನಗೆ ಅನ್ಯಾಯವಾಗಿದೆಯೆಂದರೆ ಅದರಲ್ಲಿ, ನಮ್ಮ ತಪ್ಪಿಗಿಂತ ಹೆಚ್ಚು ತಪ್ಪಿರುವುದು ನಿನ್ನ ಅಣ್ಣ ಮಹೇಶನದ್ದೆ. ಅವನಿಗೆ ಅನಿಕೇತನ ಬಗ್ಗೆ ಎಲ್ಲ ವಿಷಯವೂ ತಿಳಿದಿತ್ತು. ಆದರೂ ನಿನ್ನನ್ನು ಅನಿಕೇತನಿಗೆ ಮದುವೆ ಮಾಡಿ ಕೊಟ್ಟ. ಅದಿಕ್ಕೆ ಎಷ್ಟು ಹಣ ಪಡೆದಿರುವನೆಂದು ಹೋಗಿ ನಿನ್ನ ಅಣ್ಣನನ್ನೇ ಕೇಳು " ಎಂದು ಸಿಟ್ಟಿನಿಂದ ಹೇಳಿದ್ದರು. ಈ ವಿಷಯ ತಿಳಿದ ಮೈಥಿಲಿಗೆ ಸಿಡಿಲೇ ಬಡಿದಂತಾಗಿತ್ತು. ಸ್ವಂತ‌ ಅಣ್ಣನೇ ತಂಗಿಗೆ ಹೀಗೆ ಮೋಸ ಮಾಡಿದನೆಂದ ಮೇಲೆ, ಇನ್ಯಾರನ್ನು ದೂಷಿಸುವುದು, ಯಾರ ಮೇಲೆ ಆರೋಪ ಹೊರಿಸುವುದು..!!
ಹೀಗ್ಯಾಕೆ ಮಾಡಿದೆಯೆಂದು ಮಹೇಶನಲ್ಲಿ ಹೋಗಿ ಪ್ರಶ್ನಿಸಿದ್ದಳು ಮೈಥಿಲಿ.
" ತನಗೆ ತೀರಾ‌ ಹಣದ ಅವಶ್ಯಕತೆ ಇರುವುದರಿಂದ, ನಂದಗೋಪಾಲರು ಹಣದಾಸೆ ತೋರಿಸಿದಾಗ ಹೀಗೆ ಮಾಡಿಬಿಟ್ಟೆ. ನನ್ನನ್ನು ಕ್ಷಮಿಸು ಮೈಥಿಲಿ " ಎಂದು ಮಹೇಶ ಮೈಥಿಲಿಯಲ್ಲಿ ಕ್ಷಮೆಯಾಚಿಸಿದ್ದ.
ಆದರೆ ಯಾರ ಕ್ಷಮೆಯಾಗಲೀ, ಸಮಾಧಾನವಾಗಲೀ ಮೈಥಿಲಿಯ ಮನಸ್ಸಿಗಾದ ನೋವನ್ನು ಕಡಿಮೆ ಮಾಡಿರಲಿಲ್ಲ. ಮದುವೆಯಾಗಿ ಎರಡು ವರ್ಷವಾದರೂ ಅನಿಕೇತ್ ಮೈಥಿಲಿಯ ಸಂಸಾರದ ಬಂಡಿ ಸರಿದಾರಿಯಲ್ಲಿ ಚಲಿಸುತ್ತಿರಲಿಲ್ಲ.
ಹಳೆಯ ಯೋಚನೆಗಳ ಸುಳಿಯಲ್ಲೇ ಸಿಲುಕಿದ ಮೈಥಿಲಿಯ ಮನಸು ಒಂದು ನಿರ್ಧಾರಕ್ಕೆ ಬಂದಿತ್ತು. ಧನುಷ್ ಹೇಳಿದ ಮಾತುಗಳು ಮೈಥಿಲಿಗೆ ಸರಿ ಅನ್ನಿಸಿತ್ತು. ಅನಿಕೇತನೊಡನೆ ಹೀಗೆ ಬಲವಂತದಿಂದ ಜೀವನ ಮಾಡುವ ಬದಲು ಅವನಿಂದ ಬೇರಾಗುವುದೇ ಒಳಿತೆನ್ನಿಸಿತ್ತು. ಮರುದಿನವೇ ಈ ವಿಷಯದ ಕುರಿತು ಮನೆಯಲ್ಲಿ ತಿಳಿಸಬೇಕು ಎಂದು ತೀರ್ಮಾನಿಸಿದಳು ಮೈಥಿಲಿ. ಎಲ್ಲಕ್ಕಿಂತ ಮೊದಲು ಧನುಷನಿಗೆ ಕರೆ ಮಾಡಿ ವಿಷಯ ಹೇಳಿದ್ದಳು.
" ನಿನ್ನ ನಿರ್ಧಾರ ಸರಿಯಾಗಿಯೇ ಇದೆ. ಆ ನರಕದಿಂದ‌ ಆದಷ್ಟು ಬೇಗ ಹೊರಗೆ ಬಾ. " ಎಂದಿದ್ದ ಧನುಷ್.
" ಆದರೆ ಹೊರಬಂದು ಹೋಗುವುದೆಲ್ಲಿಗೆ ಧನು. ಅಣ್ಣನ ಮನೆಗೆ ಹೋಗಲೇ..!! ಅದಂತೂ ಸಾಧ್ಯವಿಲ್ಲ. ಅಣ್ಣ ನನಗೆ ಮಾಡಿದ ಮೋಸವನ್ನು ನಾನೆಂದಿಗೂ ಮರೆಯಲಾರೆ. ಮತ್ತೆ ಅವನ ಮನೆಗೆ ಆಶ್ರಯ ಬೇಡಿ ಹೋಗಲಾರೆ "
" ಬೇಡ ಅಣ್ಣನ ಮನೆಗೆ ಬೇಡ. ಪಿಜಿಯಲ್ಲಿ ಇರು. ನಾನೇ ವ್ಯವಸ್ಥೆ ಮಾಡುತ್ತೇನೆ. ಆದಷ್ಟು ಬೇಗ ನಿನಗೆ ಯಾವುದಾದರೂ ಕೆಲಸವನ್ನು ಕೊಡಿಸುತ್ತೇನೆ. ಸರಿನಾ " ಎಂದು ಧನು ಹೇಳಿದ ಮಾತಿಗೆ ಆಯ್ತೆಂದು ಫೋನ್ ಕಟ್ ಮಾಡಿದ್ದಳು ಮೈಥಿಲಿ.
ನನ್ನ ಮನೆಗೇ ಬಂದು ಬಿಡು ಮೈಥಿಲಿ. ನಿನ್ನನ್ನು ಎದೆಯ ಗೂಡಿನಲ್ಲಿ‌ ಗುಬ್ಬಚ್ಚಿಯಂತೆ ಬಚ್ಚಿಟ್ಟುಕೊಂಡು ಜೋಪಾನ ಮಾಡುವೆ ಎಂದು ಚೀರಿ ಹೇಳಿ ಬಿಡಬೇಕು ಎಂದೆನ್ನಿಸಿತ್ತು ಧನುಷ್ ಗೆ. ಧನುಷ್ ಮೈಥಿಲಿ ಬಾಲ್ಯ ಸ್ನೇಹಿತರು. ಆದರೆ ಧನುಷ್ ಗೆ ಮೈಥಿಲಿಯನ್ನು ಪ್ರೀತಿಸುತ್ತಿದ್ದ. ಆ ವಿಷಯವನ್ನು ಮೈಥಿಲಿಗೆ ಹೇಳಬೇಕೆಂದು ಬಹಳ ಸಲ ಯೋಚಿಸಿದ್ದ. ಆದರೆ ವಿಷಯ ಮೈಥಿಲಿಗೆ ತಿಳಿಸುವುದರ ಮೊದಲೇ, ಅನಿಕೇತನನ ಸಂಬಂಧ‌ ಮೈಥಿಲಿಗೆ ಬಂದಾಗಿತ್ತು. ಮದುವೆಯೂ ಗೊತ್ತಾಗಿತ್ತು.‌ ಬೇರೆ ದಾರಿಯಿಲ್ಲದೆ, ಧನುಷ್ ತನ್ನ ಪ್ರೀತಿಯನ್ನು ಹೇಳಿಕೊಳ್ಳದೆ ಸುಮ್ಮನಾಗಿದ್ದ. ಆದರೆ ಮೈಥಿಲಿ ಅನಿಕೇತನೊಂದಿಗೆ ಸುಖವಾಗಿಲ್ಲ, ಎಂದು ತಿಳಿದ ಧನುಷ್ ತುಂಬಾ ನೊಂದುಕೊಂಡಿದ್ದ. ಮೈಥಿಲಿ ಎಲ್ಲೇ ಇರಲಿ, ಹೇಗೇ ಇರಲಿ ಸುಖವಾಗಿರಬೇಕೆಂದು ಧನುಷ್ ಬಯಸಿದ್ದ. ಆದರೆ ಕುಡುಕ ಗಂಡನನ್ನು ಕಟ್ಟಿಕೊಂಡು ಮೈಥಿಲಿ ಪಾಡು ಪಡುವುದು ಧನುಷನಿಗೆ ಇಷ್ಟವಿರಲಿಲ್ಲ. ಹಾಗಾಗಿಯೇ ಅನಿಕೇತನಿಂದ ದೂರಾಗುವಂತೆ ಹೇಳಿದ್ದ. ಮೂರು ಹೊತ್ತೂ ಕುಡಿದ ಅಮಲಿನಲ್ಲೇ ಇರುವ ಅನಿಕೇತ್, ಮೈಥಿಲಿಯನ್ನು ಸುಖವಾಗಿ ನೋಡಿಕೊಳ್ಳುವನೇ..!! ಖಂಡಿತ ಇಲ್ಲ. ಮೈಥಿಲಿ ದಿನ ಕಣ್ಣೀರಿಡುವ ಬದಲು, ಅನಿಕೇತನಿಂದ ವಿಚ್ಛೇದನ ಪಡೆಯುವುದೇ ಲೇಸು ಎಂಬ ಅಭಿಪ್ರಾಯ ಧನುಷನದ್ದಾಗಿತ್ತು. ಮೈಥಿಲಿ ಅನಿಕೇತನಿಂದ ದೂರಾದ ಮೇಲೆ, ನನ್ನ ಪ್ರೀತಿಯನ್ನು ಅವಳಲ್ಲಿ ಹೇಳಿಕೊಳ್ಳಬೇಕು, ಅವಳು ಒಪ್ಪಿದರೆ ಅವಳನ್ನು ಮದುವೆಯಾಗಬೇಕು ಎನ್ನುವ ಯೋಚನೆಯೂ ಧನುಷನಿಗೆ ಇದ್ದದ್ದಂತೂ ಸುಳ್ಳಲ್ಲ.
ಮೈಥಿಲಿ ತಾನು ಅನಿಕೇತನಿಂದ ದೂರಾಗಬೇಕೆಂದಿರುವೆ ಎನ್ನುವ ವಿಷಯವನ್ನು, ನಂದಗೋಪಾಲರಲ್ಲಿ ಹೇಳಿದಾಗ ಅವರು ಮೈಥಿಲಿಯಲ್ಲಿ ತನ್ನ ನಿರ್ಧಾರವನ್ನು ಬದಲಿಸುವಂತೆ ಕೋರಿಕೊಂಡಿದ್ದರು. ಆದರೆ ಮೈಥಿಲಿಯ ಮನಸ್ಸೇಕೋ ಒಡೆದು ಹೋಗಿತ್ತು. ಸದಾ ಕುಡಿದ ಅಮಲಿನ್ನಲ್ಲಿರುವ ಅನಿಕೇತ್, ಇವಳ ಯಾವ ಭಾವನೆಗಳಿಗೂ ಸ್ಪಂದಿಸುತ್ತಿರಲಿಲ್ಲ.‌ ಸಂಸಾರ ಯಾಂತ್ರಿಕವೆನ್ನಿಸಿತ್ತು. ಹಾಗಾಗಿ‌ ಅನಿಕೇತನಿಂದ ದೂರಾಗುವ ದೃಢ‌ ನಿರ್ಧಾರ ಮಾಡಿದ್ದಳು ಮೈಥಿಲಿ.
ಅನಿಕೇತನಿಗೆ ವಿಷಯವನ್ನು ತಿಳಿಸಿದಾಗ, ಅವನೇನೂ ಹೇಳದೆ ಸುಮ್ಮನಾಗಿದ್ದ. ಅನಿಕೇತನಿಗೆ ನಾನು ಜೊತೆಯಿರಬೇಕು ಎನ್ನುವ ಆಶಯವಿಲ್ಲವೆನ್ನಿಸುತ್ತದೆ. ಇದ್ದಿದ್ದರೆ ಒಂದು ಸಲವಾದರೂ ತಡೆಯದೆ ಇರುತ್ತಿದ್ದರೆ. ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ. ಏನೂ ಮಾತನಾಡಲಿಲ್ಲ. ಕುಡಿತವೊಂದಿದ್ದರೆ ಅವರಿಗೆ ಪ್ರಪಂಚವೇ ಬೇಡ. ಇನ್ನು‌ ಹೆಂಡತಿ ಬೇಕಾಗುವಳೇ..!! ಎಂದುಕೊಂಡ‌ ಮೈಥಿಲಿ ತನ್ನ ಬಟ್ಟೆಬರೆಯನ್ನು ಪ್ಯಾಕ್ ಮಾಡಿಕೊಂಡಿದ್ದಳು. ಕೊನೆಯದಾಗಿ ಅನಿಕೇತನಿಗೆ ವಿದಾಯ ಹೇಳಲೆಂದು ಅವನಲ್ಲಿಗೆ ಬಂದಿದ್ದಳು.
" ಬರುತ್ತೇನೆ.‌ ಅಲ್ಲಲ್ಲ, ನಾನು ನಿಮ್ಮ ಜೀವನದಿಂದ ಶಾಶ್ವತವಾಗಿ ದೂರ ಹೋಗುತ್ತಿದ್ದೇನೆ " ಎನ್ನುವಾಗ ಮೈಥಿಲಿಯ ಕಣ್ಣುಗಳೇಕೋ ಅವಳಿಗೇ ಅರಿವಾಗದಂತೆ ತುಂಬಿಕೊಂಡಿದ್ದವು.
" ಹೋಗು ನೀನೂ ಹೋಗು. ಎಲ್ಲರೂ ಹೋಗಿ. ನನ್ನಂಥಹ ಕುಡುಕ ಯಾರಿಗೆ ಬೇಕಾಗಿದ್ದಾನೆ. ಚಿಕ್ಕ ವಯಸ್ಸಿನಲ್ಲಿ ಅಮ್ಮ ಬಿಟ್ಟು ಹೋದಳು. ಈಗ ನೀನು..!! ಹೋಗು.. " ಎಂದು ಕುಡಿದ ಅಮಲಿನಲ್ಲೇ ಏನೋ ಬಡಬಡಿಸುತ್ತಿದ್ದ ಅನಿಕೇತ್. ಅನಿಕೇತನ ಮಾತುಗಳು ಸ್ಪಷ್ಟವಾಗಿಲ್ಲದಿದ್ದರೂ, ಭಾವನೆಗಳು ಸ್ಪಷ್ಟವಾಗಿದ್ದವು. ಏನೂ ಮಾತನಾಡದೆ ಮೈಥಿಲಿ ಹಾಗೇ ಮಂಚದಲ್ಲಿ ಕೂತು ಬಿಟ್ಟಳು. ಅನಿಕೇತನ ಮೇಲೆ ಮೈಥಿಲಿಗೆ ಸಿಟ್ಟಿತ್ತು, ಅಸಹನೆಯಿತ್ತು. ಮೂರು ಹೊತ್ತೂ ಕುಡಿಯುವ ಕುಡುಕನ ಹೆಂಡತಿಯಾದೆನಲ್ಲ ಎನ್ನುವ ನೋವಿತ್ತು. ಆದರೆ ಮನದ ಯಾವುದೋ ಮೂಲೆಯಲ್ಲಿ ಗಂಡನೆನ್ನುವ ಪ್ರೀತಿಯಿರದೇ ಇರುವುದೆ. ಅನಿಕೇತ್ ಕುಡುಕನಾಗಿದ್ದ. ಆದರೆ ಕೆಡುಕನಾಗಿರಲಿಲ್ಲ. ಮೈಥಿಲಿಯ ಭಾವನೆಗಳಿಗೆ ಎಂದೂ ಸ್ಪಂದಿಸದಿದ್ದರೂ, ಅವಳೊಂದಿಗೆಂದೂ ಕೆಟ್ಟದಾಗಿ ನಡೆದುಕೊಂಡಿರಲಿಲ್ಲ. ಅವನಲ್ಲೇನೋ ಹೇಳಿಕೊಳ್ಳಲಾರದ ನೋವು, ಸಿಟ್ಟು..!! ಅದು ತಾಯಿಯಲ್ಲದ ನೋವೇ.. ತಂದೆಯ ಪ್ರೀತಿ ದೊರಕದ ಹತಾಶೆಯೇ..‌ಇಲ್ಲ ಮಲತಾಯಿಯಿಂದಲೂ ಯಾವ ಸ್ಪಂದನೆಯೂ‌ ದೊರಕದ ನಿರಾಸೆಯೇ..!! ಹೀಗೇ ಯೋಚಿಸಿದಳು ಮೈಥಿಲಿ. ಆದರೆ ಹೆಂಡತಿಯಾಗಿ ನಾನೂ ಯಾವತ್ತೂ ಅನಿಕೇತನಿಗೆ ಕಾಡುತ್ತಿರುವ ನೋವೇನೆಂಬುದನ್ನು ಅರಿಯುವ ಗೊಡವೆಗೇ ಹೋಗಲಿಲ್ಲ ಅಲ್ಲವೇ. ಕುಡುಕನನ್ನು ನನಗೆ ಕಟ್ಟಿದಿರಿ, ನನಗೆ ಮೋಸವಾಯಿತು ಎನ್ನುವ ಸಿಟ್ಟಿನಲ್ಲಿಯೇ ಇದ್ದೆ ವಿನಃ ಅನಿಕೇತನನ್ನು ಕುಡಿತದ ಚಟದಿಂದ ಬಿಡಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡಿದೆನೇ..!! ಕುಡಿಯಬೇಡಿ ಎಂದು ಬಾಯಿ ಮಾತಿಗೆ ಸಾಕಷ್ಟು ಸಲ ಹೇಳಿದ್ದೆ. ಆದರೆ ಆ ಮಟ್ಟಿನ ಕುಡಿತದ ಚಟದಿಂದ ಹೊರಬರುವುದು ಸುಲಭವಲ್ಲ. ಅದರ ಕುರಿತೂ ನಾನು ವಿಚಾರ ಮಾಡಬೇಕಿತ್ತು. ಕಾಯಾ, ವಾಚಾ, ಮನಸಾ ಇವರೊಂದಿಗೆ ಜೀವನ ಸಾಗಿಸುವೆ ಎಂದು ಸಪ್ತಪದಿ ತುಳಿದಿದ್ದೆ. ಕಷ್ಟವಿರಲಿ, ಸುಖವಿರಲಿ ಎಂದಿಗೂ ಜೊತೆಯಿರುವೆ ಎಂದು ಪ್ರಮಾಣ ಮಾಡಿದ್ದೆ. ನಾನು ಅನಿಕೇತನನ್ನು ಈಗ ಬಿಟ್ಟು ಹೋದರೆ, ಇನ್ನಷ್ಟು ಕುಡಿದು ಕುಡಿದು ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುವರು. ಮಾವನಿಗೆ ಅವರ ವ್ಯವಹಾರ, ಪ್ರತಿಷ್ಠೆಯೇ ಹೆಚ್ಚು. ಮಗ ಕುಡುಕ ಎನ್ನುವ ವಿಷಯ ಹೊರ ಲೋಕಕ್ಕೆ ತಿಳಿಯಬಾರದು ಎನ್ನುವ ಚಿಂತೆ ಮಾವನಿಗೆ. ಅದಿಕ್ಕೆ ಬಂಗಾರದ ಪಂಜರದಲ್ಲಿರಿಸಿ ಸಾಕುವ ಗಿಣಿಯಂತೆ ಅನಿಕೇತನನ್ನು ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳುತ್ತಾರೆ. ಆದರೆ ಹಾಗೆ ಮಾಡಿದರೆ ಇದಕ್ಕೆ ಪರಿಹಾರ ದೊರಕದು. ಹೀಗೇ ಏನೋ ಯೋಚಿಸಿದ ಮೈಥಿಲಿ ಕೂಡಲೇ ಧನುಷನಿಗೆ ಕಾಲ್ ಮಾಡಿದಳು.
" ಧನು, ನಿನ್ನಂದ ಒಂದು ಸಹಾಯ ಆಗಬೇಕಿತ್ತು "
" ಮೈಥಿಲಿ. ನಾನು ಮನೆಯಿಂದ ಹೊರಟಿರುವೆ. ಪಿಜಿಯಲ್ಲಿ ಈಗಾಗಲೇ ಮಾತನಾಡಿರುವೆ. ನಿನಗಾಗಿ ರೂಮನ್ನು ಕಾಯ್ದರಿಸಿದ್ದಾರೆ. ನೀನು ರೆಡಿಯಾಗು "
" ವಿಷಯ ಅದಲ್ಲ ಧನು. ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ. " ಎಂದು ತನ್ನ ಮಾತು ಮುಂದುವರಿಸಿದಳು ಮೈಥಿಲಿ. ಮೈಥಿಲಿಯ ಮಾತು ಕೇಳಿದ ಧನುಷ್
" ಸರಿ " ಎಂದಷ್ಟೇ ಹೇಳಿ ಕಾಲ್ ಕಟ್ ಮಾಡಿದ. ಅದಾದ ಮೇಲೆ ಎಲ್ಲವೂ ಮೈಥಿಲಿ ಅಂದುಕೊಂಡಂತೆಯೇ ಆಯಿತು. ಮರುದಿನ ಬೆಳಿಗ್ಗೆ ಅನಿಕೇತ್, ದುಶ್ಚಟಗಳಿಂದ ಬಿಡಿಸುವ ನಂದನವನ ಎನ್ನುವ ಆಶ್ರಮದಲ್ಲಿದ್ದ. ಅನಿಕೇತನ ಜೀವನ ಸರಿಹೋಗಬೇಕೆಂದರೆ‌ ಇರುವುದು ಇದೊಂದೇ ದಾರಿ. ನಮ್ಮ ಮರ್ಯಾದೆ, ಪ್ರತಿಷ್ಠೆ ಎಂದು ಕೂತರೆ ಅನಿಕೇತ್ ಸರಿಹೋಗಲಾರ ಎಂದು ನಂದಗೋಪಾಲರಿಗೆ ಮೈಥಿಲಿ ಮನವರಿಕೆ ಮಾಡಿಸಿದ್ದಳು. ಮಗನ ವಿಪರೀತ ಕುಡಿತದ ಚಟದಿಂದ ಬೇಸತ್ತಿದ್ದ ನಂದಗೋಪಾಲರು ಕೊನೆಗೆ ಇದಕ್ಕೆ ಒಪ್ಪಿದ್ದರು. ಆ ಆಶ್ರಮದಲ್ಲಿ ಕಳೆದ ದಿನಗಳು ಅನಿಕೇತನಿಗೆ ಕಷ್ಟವೆನ್ನಿಸಿದರೂ, ಅವನೊಂದು ಹೊಸ ಮನುಷ್ಯನಾಗಿ ಹೊರಬಂದಿದ್ದ. ಕುಡಿತದ ಚಟದಿಂದ‌ ದೂರಾಗಿದ್ದ.
ಅಂದು ಅನಿಕೇತನನ್ನು ಮನೆಗೆ ಕರೆದುಕೊಂಡು ಹೋಗಲು ಮೈಥಿಲಿ, ಧನುಷ್ ಇಬ್ಬರೂ ಬಂದಿದ್ದರು. ಯಾವಾಗಲೂ ಕುಡಿದ ಅಮಲಿನಲ್ಲೇ ಇರುತ್ತಿದ್ದ ಗಂಡನನ್ನು ನೋಡಿದ್ದ ಮೈಥಿಲಿಗೆ, ಅನಿಕೇತನ ಹೊಸ ರೂಪವನ್ನು ನೋಡಿ ಹೇಳಿಕೊಳ್ಳಲಾಗದಷ್ಟು ಸಂತೋಷವಾಗಿತ್ತು. ಕುಡಿತದ ಕೂಪದಿಂದ ಹೊರಬಂದ ಅನಿಕೇತನಿಗೂ ಪ್ರಪಂಚ ಹೊಸದೆನ್ನಿಸಿತ್ತು.
" ತುಂಬಾ ಥಾಂಕ್ಸ್ ಧನು. ಪ್ರತಿ ಹೆಜ್ಜೆಯಲ್ಲೂ ನನ್ನ ಸಹಾಯಕ್ಕೆ ನೀನು ನಿಂತೆ. ಅನಿಕೇತನನ್ನು ಆಶ್ರಮಕ್ಕೆ ಸೇರಿಸುವುದರಿಂದ ಹಿಡಿದು ಎಲ್ಲ ವಿಷಯದಲ್ಲೂ ನೀನು ನನಗೆ ಬೆಂಬಲವಾಗಿದ್ದೆ. ಥಾಂಕ್ಯೂ ಸೋ ಮಚ್ " ಎಂದು ಮನಸಾರೆ ಧನುಷ್ ಗೆ ಧನ್ಯವಾದ ಹೇಳಿದ್ದಳು ಮೈಥಿಲಿ. ದನುಷ್ ಮಾಡಿದ ಸಹಾಯಕ್ಕೆ ಅನಿಕೇತನೂ ವಂದನೆಗಳನ್ನು ತಿಳಿಸಿದ್ದ.
" ಸರಿ ಧನು, ನಾವಿನ್ನು ಬರುತ್ತೇವೆ. ಮಾವ, ಅತ್ತೆ ಕಾಯ್ತ ಇರ್ತಾರೆ. ಬದಲಾದ ತಮ್ಮ ಮಗನನ್ನು ನೋಡಲು " ಎಂದು ಹೇಳಿ ಕಾರಿನ ಕಡೆಗೆ ಹೆಜ್ಜೆ ಹಾಕಿದ್ದಳು ಮೈಥಿಲಿ.
" ಈಗ ನಾನು ಯಾವ ನಶೆಯಲ್ಲೂ ಇಲ್ಲ. ನಾನೇ ಸೇಫ್ ಆಗಿ ಕಾರ್ ಡ್ರೈವ್ ಮಾಡಿಕೊಂಡು ಹೋಗುವೆ. ಕೀಸ್ ನನಗೆ ಕೊಡು " ಎಂದು ಮೈಥಿಲಿಯಲ್ಲಿ ಕೇಳಿ ಪಡೆದಿದ್ದ ಅನಿಕೇತ್.
ಧನುಷ್ ದೂರದಿಂದ ಅನಿಕೇತ್, ಮೈಥಿಲಿಯನ್ನೇ ನೋಡಿದ. ಮುದ್ದಾದ ಜೋಡಿ, ಎಷ್ಟೋ ಸಮಯದ ನಂತರ ಮೈಥಿಲಿಯೂ ಸಂತೋಷದಿಂದಿರುವಂತೆ ತೋರಿತು. ಇವರಿಬ್ಬರೂ ಹೀಗೆಯೇ ಸದಾ ಸಂತೋಷವಾಗಿರಲಿ ಎಂದು ಮನಸಾರೆ ಹಾರೈಸಿದರೂ, ಧನುಷ್ ನ ಕಣ್ಣಂಚೇಕೋ ತೇವವಾಗಿತ್ತು. ಕನಸು, ಆಸೆ, ಪ್ರೀತಿ ಏನೇ ಇರಲಿ ಕೊನೆಗೆ ನಡೆಯುವುದು, ಸಿಗುವುದು ಎಲ್ಲವೂ ನಮ್ಮ ಋಣಾನುಬಂಧಕ್ಕೆ ಸರಿಯಾಗಿಯೇ ಎಂದುಕೊಂಡ ಧನುಷ್, ತಾನೂ ತನ್ನ ಕಾರಿನೆಡೆಗೆ ಹೆಜ್ಜೆ ಹಾಕಿದ.
About the Competition
The Poetry and Creative Writing Competition 2026 by Hashtag Kalakar celebrates the art of storytelling, offering writers a platform to share their unique voices. This competition brings together a diverse array of participants, showcasing a wide range of styles and themes, and fostering a community of creative expression.
We extend our heartfelt thanks to Bindu u for sharing the moving short story "ನಾತಿಚರಾಮಿ" in the Poetry and Creative Writing Competition 2026. Your contribution highlights the power of storytelling to explore and challenge complex social themes. We appreciate your participation and look forward to your future works.
About Hashtag Kalakar
Hashtag Kalakar is a creative platform dedicated to providing artists, writers, singers and other creative talents with opportunities to showcase their work and reach wider audiences through competitions, features and creative initiatives.


Comments