ಒಡೆದು ಹೋದ ಕನ್ನಡಿ
By Sushma Odugoudar
ನೀನು ನನಗಂದು ನೀಡಿದೆ ಒಂದು ಸುಂದರ ಕನ್ನಡಿ
ಸೆರೆ ಹಿಡಿದಿತ್ತು ಅದು ನಿನ್ನ ಸ್ನೇಹದ ಸವಿನುಡಿ
ಆದರೆ ನನ್ನ ಬುದ್ದಿಯನ್ನು ಆವರಿಸಿತ್ತು ಆಗ ಕೋಪದ ಬಿಗಿಹಿಡಿ
ನನಗೆ ಅರಿವಿಲ್ಲದೆಯೇ ಆಗಿ ಹೋಗಿತ್ತು ನಿನ್ನ ಕನ್ನಡಿ ಪುಡಿಪುಡಿ
ಮೆರೆದಾಡಿದೆ ಶಾಶ್ವತವಾಗಿ ಕಳಚಿಕೊಂಡೆ ನಿನ್ನಿಂದ ಅನ್ನುವ ಜಂಬದಲಿ
ನೀ ಮಾತ್ರ ಸ್ನೇಹವನ್ನೇ ಕೋರುತ್ತಿದೆ ಪ್ರತಿ ತುಣುಕಿನ ಬಿಂಬದಲಿ
ಭಾಸವಾಯಿತೆನಗೆ ಒಮ್ಮೆಲೇ ಮೇಲಿನಿಂದ ಕೆಳಕ್ಕೆ ಬಿದ್ದ ಹಾಗೆ
ಶಾಂತವಾಗಿ ಬೀರುತಿದ್ದೆ ನೀನು ಸೋತರೂ ಗೆಲುವಿನ ಹೂನಗೆ
ಅರಿವಾಯಿತೆನಗೆ ಕಳೆದುಕೊಂಡೆನೆಂದು ನನ್ನ ಒಂದು ಅಮೂಲ್ಯವಾದ ವಸ್ತು
ಅದನ್ನು ಹುಡುಕಿ ಹುಡುಕಿ ನಾನಾಗಿ ಹೋಗಿರುವೆ ಸುಸ್ತು
ತಿಳಿಯುತೆನಗೆ ಒಂದೇ ಎಂದು ಒಡೆದು ಹೋದ ಕನ್ನಡಿ ಮತ್ತು
ಒಡೆದು ಹೋದ ಮುತ್ತು ಹಾಗೂ ಕಳೆದು ಹೋದ ಹೊತ್ತು
ನಿನ್ನಲ್ಲಿ ಮಾಡಿಕೊಳ್ಳುವೆ ಇಂದು ಪುನಃ ಒಂದು ಕೋರಿಕೆ
ಉದಾಸೀನ ಪಡದೇ ನೀ ಮಾಡು ಅದರ ಪೂರೈಕೆ
ಕೊಟ್ಟುಬಿಡು ಎನಗೆ ಅಂತಹದೇ ಇನ್ನೊಂದು ಕನ್ನಡಿ
ನೋಡಿಕೊಳ್ಳುವೆ ನಾನು ಅದನ್ನು ಕಾಯ್ದಿಟ್ಟು ನನ್ನ ಕಣ್ ರೆಪ್ಪೆಯಡಿ
By Sushma Odugoudar

Comments