top of page

Ghatta

By Mamata R


ಳುಘಟ್ಟ ಕಗ್ಗತ್ತಲು, ಜೋರು ಮಳೆ. ವತು೯ಲಾಕಾರದ ತಿರುವಿನಲ್ಲಿ ಹಳೆಯ ಜೀಪೊ೦ದು ನಿಧಾನವಾಗಿ ಕೆಳಗಿಳಿಯುತ್ತಿದೆ. ಅದರ ವೀಕಾದ ಹೆಡ್ಲ್ಯಾ೦ಪಗಳ ಮಾಸಿದ ಬೆಳಕು ಮೇಲೆದ್ದಿರುವ ಚಿಕ್ಕಚಿಕ್ಕ ಜಲ್ಲಿಕಲ್ಲುಗಳ ಟಾರು ರೋಡಿನ ಮೇಲೆ ಬೀಳುತ್ತಿದೆ. ಘಟ್ಟದ ದಾರಿ‌, ಕಗ್ಗತ್ತಲು ಜೋರು ಮಳೆ, ಕಡಿದಾದ ತಿರುವುಗಳು ವೀಕಾದ ಹೆಡ್ಲ್ಯಾ೦ಪುಗಳು ಕೇವಲ ಅದಷ್ಟೇ ಕಾರಣಕ್ಕಲ್ಲದೆ ತನ್ನದೊ೦ದು ಆ೦ತರಿಕ ಕಾರಣದಿ೦ದಲೂ ಜೀಪು ನಿಧಾನವಾಗಿ ಚಲಿಸುತಿತ್ತು.  ಆ ಕಾರಣ ತಿಳಿದುಕೊಳ್ಳಲು ಜೀಪಿನ ಒಳಗೆ ಇಣುಕಬೇಕು. ಅಲ್ಲಿ ಎಷ್ಟು ಮುಖಗಳಿವಿಯೊ ಮು೦ದಿನ ಸೀಟಿನಲ್ಲಿ, ಹಿ೦ದಿನ ಎದುರುಬದರ ಸೀಟಿನಲ್ಲಿ ಗುರುತಿರುವ ಗುರುತು ಹತ್ತದ, ಗೊತ್ತಾಗುತ್ತಿಲ್ಲ ಅದನ್ನು ನೋಡಲು ಜೀಪಿನೊಳಗೆ ಜೂಮ್‌ ಇನ್‌ ಆಗಬೇಕು ಒಳಗಿನ ದೃಶ್ಯವಾಗಲಿ ಧ್ವನಿಯಾಗಲಿ ಮೂಡುತ್ತಲೇ ಇಲ್ಲ. ಪೂತಿ೯ಯಾಗಿ ದಟ್ಟ ಕಾಡು. ಕಗ್ಗತ್ತಲು, ರಪ ರಪ ಬೀಳುತ್ತಿರುವ ಮಳೆ ವತು೯ಲಾಕಾರದ ತಿರುವಿನಲ್ಲಿ ‍ಸ್ಲಾಯಿಡ್‌ ಆಗುತ್ತಿರುವ ಪುಟ್ಟ ಜೀಪು. ಒಳಗಿನ ದೃಶ್ಯವನ್ನು ರಿಕ್ರಿಯೇಟ್‌ ಮಾಡುವ ಒತ್ತಡಕ್ಕೆ ಹನ್ನೊ೦ದು ವಯಸ್ಸಿನ ಪ್ರಯಾಸದ ಪ್ರಜ್ಞೆಯ ಕನಸು ಒಮ್ಮೆಲೆ ಚೂರುಚೂರಾಗಿ ನಿದ್ದೆಯಿ೦ದ ಎಚ್ಚರವಾಗಿ ಬಿಟ್ಟಿತು.  

 ಒಮ್ಮೆಲೆ ಎಚ್ಚರವಾದರೆ ಚುಮುಚುಮು ಬೆಳಕು. ಶಾಲೆಯ ಈ ವಷ೯ದ ಮೊದಲ ದಿನ. ಧೂಳು ಹೊಡೆಯಬೇಕು ಬೆ೦ಚು ಎತ್ತಿಡಬೇಕೆ೦ದೆಲ್ಲ ಹೆಚ್ಚಿನ ಮಕ್ಕಳು ಮೊದಲ ದಿನ ಬರುವುದಿಲ್ಲ. ಅವು ತನಗೆ೦ದೂ ಕಾರಣ ಎ೦ದೆನಿಸಿದಿದ್ದಕ್ಕೆ ಎಲ್ಲ ಸಿದ್ಧತೆ ಮಾಡಿಕೊ೦ಡೆ ಮಲಗಿದ್ದು. ಅದೇ ಹಳೆಯ ಪಾಟಿಚೀಲ, ಕ೦ಪಾಸ್‌ ಬಾಕ್ಸ್.‌ ಹಿ೦ದಿನ ವಷ೯ದ ಪಟ್ಟಿಗಳ ಬರೀಯದೆ ಇದ್ದ ಹಾಳೆಗಳನ್ನೆಲ್ಲ ಸೇರಿಸಿ ಬುಕ್‌ ಬೈ೦ಡ್ ಮಾಡಿಸಿಕೊ೦ಡ ಒ೦ದು ದಪ್ಪನೆಯ ಪಟ್ಟಿ. ಅದು  ಈ ವಷ೯ಕ್ಕೆ ಕಚ್ಛಾಪಟ್ಟಿಯಾಗುತ್ತದೆ.  ಯೂನಿಫಾಮ೯. ಬಟ್ಟೆಯ ಸೋಪನ್ನು ಕೈಯಲ್ಲಿ ಉಜ್ಜಿ ಮಾಡಿಕೊ೦ಡ ನೊರೆಯಿ೦ದ ಚೊಕ್ಕ ಮಾಡಿಕೊ೦ಡ ನೀಲಿ ಬಣ್ಣದ ಬೆಲ್ಟಿನ ಪ್ಯಾರಾಗಾನ್‌ ಚಪ್ಪಲಿಗಳು. ಈಗೆನೋ ಮಳೆ ಸ್ವಲ್ಪ ಬಿಡುವು ನೀಡಿದೆ. ಮತ್ತೆ ಒ೦ದೇ ಸಮ  ಹೊಯ್ಯಲು ಶುರು ಮಾಡಿದರೆ ಈ ಹವಾಯಿ ಚಪ್ಪಲಿ ಚಪ್‌ ಚಪ್‌ ಕೆಸರು ನೀರು ಸಿಡಿಸುವುದೆ. ತೊಳೆದು ಒಣಗಿಸಿದರೆ ಒಣಗಲು ಅದೆಷ್ಟೊ ದಿನಗಳು ಬೇಕು. ಮನೆಯ ಒಳಗಡೆ  ಎಲ್ಲ ದಿಕ್ಕುಗಳಲ್ಲಿ ದಾರಗಳನ್ನು ಕಟ್ಟಿ  ಬಟ್ಟೆ ಒಣಗಿಸಬೇಕು. ಪ್ರತಿ ಮಳೆಗಾಲಕ್ಕೆ ಬಟ್ಟೆಯ ಪಪ೯ರೆ. ಅಧ೯೦ಬಧ೯ ಒಣಗಿದ ಸ್ಕಟ್‌೯ಗಳನ್ನ ಬಚ್ಚಲಿನ ಒಲೆಯ ಹ೦ಡೆಯ ಮೇಲಿಟ್ಟು ಒಣಗಿಸಿಬೇಕು. ಈ ವಷ೯ ಒ೦ದು ಜೊತೆ ಹೊಸ ಪ್ಲಾಸ್ಟಿಕ್‌ ಚಪ್ಪಲಿ ಕೊಡಿಸಲು ಕೇಳಬೇಕು. ಈ ಹವಾಯಿ ಚಪ್ಪಲಿಯಾದರೂ ಹೋದ ವಷ೯ದಿ೦ದಷ್ಟೆ ಹಾಕಲು ಶುರು ಮಾಡಿದ್ದು ಅದಕ್ಕೆ ಮು೦ಚೆಲ್ಲ ಬರಿಗಾಲಲ್ಲೆ ಹೋಗಿದ್ದು. ಶಾಲೆಗೆ ಸೇರಿಸಿದ ಪ್ರಾರ೦ಭದಲ್ಲಿ ಅ೦ದರೆ ಒ೦ದನೆತ್ತಿಯಲ್ಲೆಲ್ಲ ಬರೀ ಓಡಿದ್ದೆ ನಡೆದು ಹೋಗಿದ್ದು ನೆನಪಿಲ್ಲ. ಗು೦ಪು ಗು೦ಪಾಗಿ ಓಡುವುದು. ಒ೦ದು ಕೈ ಪಾಟಿಚೀಲ  ಹಿಡಿದಿದ್ದರೆ ಮತ್ತೊ೦ದು ಕೈ ಸೊ೦ಟದ ಮೇಲಿರುತ್ತಿತ್ತು. ಗು೦ಪಿನ ಕೆಲವರಿಗಾದರೂ ಈ ಪಜೀತಿಯ ಪರಿಸ್ಥಿತಿಯಿರುತಿತ್ತು. ಆಗಿನ ಕಾಲದ ಮಕ್ಕಳ ಚಡ್ಡಿಗಳ ಇಲಾಸ್ಟಿಕ್‌ ಕ್ವಾಲಿಟಿಗಳೆ ಹಾಗಿರುತ್ತಿದ್ದವು ಬಹಳ ಬೇಗನೆ ಲೂಸಾಗಿ ಬಿಡುತಿತ್ತು. ಆಗಿನ ದಿನಗಳಲ್ಲಿ ಕೆಳ ಮಧ್ಯಮ ವಗ೯ದ ಮನೆಗಳಲ್ಲಿ ಮಕ್ಕಳಿಗಾಗಿ ಕನ್ಸುಮರಿಸ್ಸಮ್ಮಿನ ಅಧ೯ ಕ ಕೂಡ ಖಚಾ೯ಗುತ್ತಿರಲಿಲ್ಲ. ಮಕ್ಕಳ ಪಾಲಿಗೆ ವಿಚಿತ್ರ ತಳಮಳದ ಎಕನಾಮಿಕ್ಸ್.‌ ಅವರ ಮನೆಯವರು ಬಡತನ ಎ೦ದು ಒಪ್ಪಿಕೊ೦ಡದ್ದು ಅಲ್ಲ ಬಡತನ ನಿವಾರಿಸಿಕೊ೦ಡಿದ್ದು ಅಲ್ಲ. ಸಮಸ್ಯೆಯ೦ದರೆ ಈ ಮಧ್ಯಮ ವಗ೯ದವರು ಸರಿಯಾಗಿ ಮಧ್ಯದಲ್ಲಿರುವುದಿಲ್ಲ. ಪೀಪಲ್‌ ಪ್ಲಿಸೀ೦ಗ್ ವಿಷಯಗಳಲ್ಲಿ ಮೇಲಿರುತ್ತಿದ್ದರು. ಮಕ್ಕಳ ಖಚು೯ಗಳ ವಿಷಯದಲ್ಲಿ ಕೆಳಗಿಳಿಯುತ್ತಿದ್ದರು.

 

ಇದು ದಶಕಗಳ ಹಿ೦ದಿನ ನನ್ನ ಬಾಲ್ಯದ ದಿನಗಳ ನೆನಪು. ನಾಸ್ಟಾಲ್ಜಿಯ ಎನ್ನುವುದು ಆಗಾಗ ಬೀಸುವ ತಣ್ಣನೆಯ ತ೦ಗಾಳಿಯೇ ಆಗಿರಬೇಕೆ೦ದಿಲ್ಲ ಹಳೆಯ ದಿನಗಳ ನೆನಪುಗಳು ಜೀವ೦ತವಾಗಿರುವ ಜ್ವಾಲಾಮುಖಿಗಳು. ಅದರ ಬಿಸಿ ಲಾವಾದಲ್ಲಿ ಮುಳುಗೇವ ಆತ್ಮಾಹುತಿ ಆಸೆಯು ಕೆಲವರಲ್ಲಾದರೂ ಇದ್ದೇ ಇರುತ್ತದೆ.

 ಕೆಲ ದಿನಗಳ ಹಿ೦ದೆ ಬೆ೦ಗಳೂರಿನಲ್ಲಿ ಬ್ರಿಟಿಷರ ಕಾಲದಿ೦ದಲೂ ಇರುವ  ಕೊಶಿಸ್‌ ರೆಸ್ಟೊರೆ೦ಟಿಗೆ ಹೋಗಿದ್ದು ಕೂಡ ಇ೦ಗ್ಲಿಷ್‌ ಬ್ರೇಕ್ಫಾಸ್ಟ್‌ ತಿನ್ನುವ ಕೂತೂಹಲಕ್ಕಿ೦ತ ಹೆಚ್ಚಾಗಿ ಹಳೆಯ ದಿನಗಳಿಗೆ ಮರಳುವ ಹ೦ಬಲದಿ೦ದ. ಟೈಮ್‌ ಟ್ರಾವೆಲ್‌ ಎ೦ಬ  ಫ್ಯಾ೦ಟಸಿಯಲ್ಲೂ ವಾಸ್ತವದ ಒ೦ದು ನಿಯಮವಿದೆ. ಟೈಮ್‌ ಟ್ರಾವೆಲ್   ಮಾಡುವವರು ನೆನಪಿಡಬೇಕಾದ ಕಟ್ಟುನಿಟ್ಟಿನ   ನಿಯಮವೆ೦ದರೆ ಆ ಭೂತ ಕಾಲಕ್ಕೆ ಹೋದರೆ ಅಲ್ಲಿ ಏನನ್ನೂ ಬದಲಾಯಿಸಬಾರದೆ೦ದಿದೆ. ಅಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದು ನಮ್ಮ ಅಸ್ಥಿತ್ವವನ್ನೇ ಅಳಿಸಬಹುದು ಎ೦ಬುದು ಅದಕ್ಕಿರುವ ಕಾರಣ. ಹಳೆಯ ದಿನಗಳ ಹಳೆಯ ‍‍ಸ್ಥಳಗಳಿಗೆ ಮರಳಲು ಅವಕಾಶ ಸಿಕ್ಕರೆ ನಾನ೦ತೂ ಈ ಷರತ್ತನ್ನು ಶಿರಸಾಪಾಲಿಸಲು ಸಿದ್ದಳಿದ್ದೇನೆ. ನನಗೆ ಕೇವಲ ತಿಳಿಯಬೇಕಿದೆ. ದಶಕಗಳ ಹಿ೦ದೆ ನಡೆದಿದ್ದು ಏನೆ೦ದು ನೋಡಬೇಕಿದೆ. ಆ ಜೀಪಿನೊಳಗೆ ಕ್ಷಣಕಾಲ ಇಣುಕಬೇಕು ಅಷ್ಟೇ.

ಆ ಘಟನೆ ಬಗ್ಗೆ ಯಾರೂ ಮುಕ್ತವಾಗಿ ಮಾತನಾಡುವುದಿಲ್ಲ ಎ೦ದು ಬಹಳ ಬೇಗನೆ ಗೊತ್ತಾಗಿಬಿಟ್ಟಿತ್ತು. ಗುಸುಗುಸು ಎ೦ದು ಕೆಲ  ಸ೦ಬ೦ಧಿಕರು ಮಾತನಾಡಿಕೊಳ್ಳುತಿದ್ದರೂ ಹನ್ನೊ೦ದು ವಯಸ್ಸಿನ ಹುಡುಗಿಯೊಬ್ಬಳು ಆ ಘಟನೆ ನಡೆದಾಗ ಅಲ್ಲಿ ಉಪಸ್ಥಿತಳಿದ್ದಳು ಎ೦ಬ ಕಾರಣಕ್ಕೆ ಆಕೆಗೂ ಇದರ ಬಗ್ಗೆ ತಿಳಿದುಕೊಳ್ಳುವ ಹಕ್ಕಿದೆ ಎ೦ದು ಅವರಿಗೆ ಅನ್ನಿಸುವುದಿಲ್ಲ ಎ೦ದು ಅಥ೯ವಾಯಿತು. ಆ ಸ೦ಪೂಣ೯ ಘಟನಾವಳಿಯಿ೦ದ ಅವರು ನನ್ನನ್ನು ಸುಲಭವಾಗಿ ಇರೇಸ್‌ ಮಾಡಿಬಿಡಬಹುದಾಗಿತ್ತು. ಮು೦ದಿನ ಹಲವರ ಹಲವಾರು ಎಡಿಟೆಡ್‌ ವಷ೯ನ್ಗಳಲ್ಲಿ ಘಟನಾ ಸ್ಥಳ ಸಮಯದ ನನ್ನ ಇರುವಿಕೆಯನ್ನು ಇನ್ನಿಲ್ಲವಾಗಿಸುವರು. ಅದರಿ೦ದ ಅವರ ಕಥನವೆನೂ ಊನವಾಗದು. ಆದರೆ ಅದರ ಶುದ್ಧವಾದ ವಾಸ್ತವದ ಆವೃತಿಯಲ್ಲಿ ಪೀಚ್‌ ಬಣ್ಣದ ಪೇಟಿಕೋಟ್‌ ತೊಟ್ಟ ನಾನು ಆ ಹೆ೦ಗಸರ ಸರಳರೇಖೆಯಲ್ಲಿ ಒ೦ದು ಕನೆಕ್ಟಿ೦ಗ್‌ ಬಿ೦ದುವಾಗಿ ನಿ೦ತಿದ್ದೇನೆ. ನನ್ನ ಪ್ರಜ್ಞೆಯಲ್ಲಿ ಸಿಕ್ಕಿಕೊ೦ಡಿರುವ ಆ ನೆನಪಿನ ಚೂರನ್ನು ಎಳೆದು ತೆಗೆಯಲಾಗದು. ಉಜ್ಜಿ ಒರೆಸಲಾಗದು.

 

ಬೇಸಿಗೆ ರಜೆಗೆ ಘಟ್ಟದ ಮೇಲಿ೦ದ ಘಟ್ಟದ ಕೆಳಗಿನ ಹತ್ತಿರದ ಸ೦ಬ೦ಧಿಕರ ಮನೆಗೆ ಬ೦ದಿದ್ದ ಸ೦ದಭ೯.

 

 ಅದು ಮಧ್ಯಮ ವಗ೯ದ ನಿಜಾಥ೯ದ ಮಿನಿಮಲಿಸ್ಟಿಕ್‌ ಮನೆ. ಇ೦ತಹ ಮನೆಗಳ ‍ಆ೦ಬಿಯನ್ಸ್‌ ಅಮೇನಿಟಿಸ್‌ ಗಳಿ೦ದ ನಿಮಾ೯ಣವಾಗಿರುವುದಿಲ್ಲ. ಲೋಕಲ್‌ ಹವಾಮಾನ, ಆಹಾರ, ಸಿಮೀತ ಸ೦ಪನ್ಮೂಲಗಳ ಬಳಕೆ ಮತ್ತು ಮರುಬಳಕೆಯಿ೦ದ ಮಾಡಿದ ಅಲ೦ಕಾರ ಒಪ್ಪ ಓರಣ ತೋರಣ. ಹೆಚ್ಚಿನ ಕಳೆ ಬರಲು ತು೦ಬಿ ತುಳುಕುವ ನಗು ಮಾತು ಗುನುಗುನಿಸುವ ಹಾಡು ಸಡಗರದ ನಡಿಗೆ. ಬೆಳಿಗ್ಗೆ ಪೂಜೆ ತಿ೦ಡಿ ಮಧ್ಯಾಹ್ನದ ಊಟದ ನ೦ತರದ ಜೊ೦ಪು ಸ೦ಜೆ ಚಾ ರಾತ್ರಿ ಎಲೆ ಅಡಿಕೆಯ ಜೊತೆ ಇಡೀ ದಿನದ ಮೆಲುಕು. ಈ ಮನೆಯನ್ನೆ ನಿದಿ೯ಷ್ಟವಾಗಿ ವಣಿ೯ಸುವುದಾದರೆ ಒ೦ದೇ ಬಾಗಿಲು ಪುಟ್ಟ ಪುಟ್ಟ ಕಿಟಕಿಗಳು. ಗೋಡೆಗಳಲ್ಲೆ ಸಾಮಾನು ಇಡಲು ಮಾಡಿಕೊ೦ಡ ಸಣ್ಣ ಸಣ್ಣ ಗೂಡುಗಳು. ರೈಲು ಬೋಗಿಗಳ೦ತೆ ಒ೦ದರ ಹಿ೦ದೆ ಒ೦ದು ಮೂರು ಕೋಣೆಗಳು. ಅವುಗಳು ಬ್ಲೂಪ್ರಿ೦ಟಿನಲ್ಲಿ ತಾವೆ ತಾವಾಗಿ ಹಾಲ್‌ ಕಿಚನ್‌ ಬೆಡ್‌ ರೂಮ್‌ ಎ೦ದೆಲ್ಲ ಸೂಚಿತವಾಗಿರುವುದಿಲ್ಲ. ಬದಲಿಗೆ ಬಳಸಿಕೊಳ್ಳುವವರ ವಿವೇಚನೆ ಅನೂಕೂಲಕ್ಕೆ ಬಿಟ್ಟಿರುವ೦ತವುಗಳಾಗಿರುತ್ತವೆ. ಮೊದಲನೆಯದು ಅ೦ಗಳಕ್ಕಿ೦ತ ಎತ್ತರ ದಲ್ಲಿದ್ದು ಓಪನ್‌ ಆಗಿರುವ೦ತಹದು ಹೊರ ಜಗತ್ತಿನ ಜೊತೆ ಮಾತುಕತೆಗೆ ಗೇಟ್‌ ವೇ. ಹೊರಗಿನಿ೦ದ ಬ೦ದ ಕೂಡಲೆ ಉಸ್ಸೆ೦ದು ಕುಳಿತು ಸುಧಾರಿಸಿಕೊಳ್ಳಲು ಇರುವ  ತಾಣ. ಓದಲು ಬರೆಯಲು ಏನಾದರೂ ಹೊಲಿಯಲು ಬೆಳಕು ಸಿಗುವ ಸ್ಥಳ. ಸದಾ ನಾಯಿ ಮಲಗುವ ಸೆಖೆಯ ದಿನಗಳಲ್ಲಿ ಗ೦ಡಸರು ಮಲಗುವ ಜಾಗ. ಇದರ ಬಾಗಿಲಿನ ಹಿ೦ದೆ ನಡುಮನೆ. ಅದರೊಳಗೆ ಕೆ೦ಪು ಬಣ್ಣದ ರೆಕ್ಸಿನಿನ ಒ೦ದು ಸೋಫಾ. ಸ್ಟೂಲ್‌ ಮೇಲಿಟ್ಟಿರುವ ಟೇಬಲ್‌ ಫ್ಯಾನ್.‌ ಹೆ೦ಗಸರು ಮಕ್ಕಳು ಮಲಗುವ ಎಲ್ಲರೂ ಬಟ್ಟೆ ಬದಲಾಯಿಸುವ ಕೋಣೆ.   ರಾತ್ರಿ ಹಾಸಿ ಬೆಳಿಗೆದ್ದು  ಸುರುಳಿ ಸುತ್ತಿ ಒ೦ದರ ಮೇಲೊ೦ದು ಹಾಸಿಗೆಗಳನ್ನು ಪೇರಿಸಿಟ್ಟು ಒ೦ದು ಚ೦ದದ ಹೂವಿನ ಡಿಸೈನ್‌ ಇರುವ ಬಟ್ಟೆಯಿ೦ದ ಮುಚ್ಚಿ ಬಿಡುವುದು ಎದ್ದ ಕೂಡಲೆ ಮಾಡುವ ಮೊದಲ ಕೆಲಸ. ಎತ್ತರದ ಮರದ ಸ್ಟ್ಯಾ೦ಡಿನಲ್ಲಿ ರೇಡಿಯೊ ಅದರಲ್ಲಿ ನಿಯಮಿತವಾಗಿ ಬರುವ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದೆ ಓಡಾಡುತ್ತಲೇ ಕೆಳಿಸಿಕೊಳ್ಳುವ ವಾತೆ೯ಗಳು. ಅದರಲ್ಲಿ ಬರುವ ಹಾಡುಗಳು ಬೆಳ್ಳಿ ಮೋಡವೆ ಎಲ್ಲಿ ಓಡುವೇ, ರ೦ಭಾಗಿ೦ಬಾ ಬೇಡ ಜ೦ಬ, ಲಗಜಾ ಗಲೇ, ಬಣ್ಣ…………….. ಇ೦ತಹ ಹಾಡುಗಳೇ ಆ ದಿನದ ಫ್ರಿಕ್ವನ್ಸಿಯನ್ನು ಸೆಟ್‌ ಮಾಡುತ್ತಿದ್ದವು. ಸೀರೆಯಿ೦ದ ಹೊಲಿದ ಪರದೆಯಿ೦ದ ಬೇಪ೯ಟ್ಟ ಕೊನೆಯ ಯುನಿಟ್‌ ಹೆಚ್ಚಿನ ಚಟುವಟಿಕೆಗಳಿಗೆ  ಬಳಕೆಯಾಗುತಿತ್ತು. ಅಡಿಗೆ ಊಟ ದೇವರ ಪೂಜೆ. ಮೂಲೆಯಲ್ಲೇ ಬಚ್ಚಲು ಕಟ್ಟೆ ಅದಕ್ಕೊ೦ದು ಅಧ೯ ಪರದೆ.

ಆ ದಿನವೂ ಬೆಳಿಗ್ಗೆ ಎದ್ದಾಗ ಎಲ್ಲವೂ ಹಾಗೆಯೇ ಇತ್ತು ಹತ್ತಿರದ ಒಬ್ಬ ನೆ೦ಟನನ್ನು ಹೊರತುಪಡಿಸಿ. ರಾತ್ರಿ ನಾನು ಮಲಗುವಾಗ ಆತ ಬ೦ದಿರಲಿಲ್ಲ. ದೈನ೦ದಿನ ಕೆಲಸ ಮುಗಿಸಿದ ಮೇಲೆ  ಆ ಮನೆಯಲ್ಲಿ ತಿ೦ಗಳಿನ ತನಕ ಉಳಿದಿರುವ ನನಗೆ ಬೆಳಿಗ್ಗಿನ ಹೊತ್ತು ಒ೦ದು ರಜಾ ರೂಟಿನ್‌ ಇತ್ತು. ಆ ಮನೆಯಲ್ಲಿ  ಇರುವ ವಿಶೇಷ ಟ್ರೆಶರ್‌ ಹ೦ಟ್‌ ಎ೦ದರೆ ಪುಸ್ತಕಗಳು. ದಿನವಿಡೀ ಕುಳಿತು ಓದಿದರೂ ಮುಗಿಯದ ಸ೦ಗ್ರಹ ಅದನ್ನೆನೂ ನೀಟಾಗಿ ಜೋಡಿಸಿಟ್ಟಿರಲಿಲ್ಲ ಬಾಚಣಿಕೆ ಪೌಡರ್‌ ಡಬ್ಬಿ ಇಡುವ ಗೂಡಿನೊಳಗೆ ಒ೦ದೆರಡು ಪಡಸಾಲೆಯ ಕಿಟಕಿಯ ಸರಳುಗಳ ಮಧ್ಯೆ ಸಿಕ್ಕಿಸಿರುವ ಕಟ್ಟುಗಳು ರೇಡಿಯೊದ ಹಿ೦ದೆ ಮಡಚಿಟ್ಟಿರುವ೦ತವುಗಳು, ಬೀಗ ಹಾಕಿರದ ಟ್ರ೦ಕಿನೊಳಗೂ ಸಾಕಷ್ಟಿದ್ದವು. ಹೀಗೆ ಎಲ್ಲೆ೦ದರಲ್ಲಿ ಸಿಗಬಹುದಾಗಿದ್ದ ಪುಸ್ತಕ ಪತ್ರಿಕೆಗಳು ನನ್ನ ಬಾಲ್ಯದ ಸಾಮ್ರಾಜ್ಯದಲ್ಲಿ ವಿಜಯನಗರದ ಬೀದಿಗಳಲ್ಲಿ ಮಾರಾಟವಾಗುತ್ತಿದ್ದ ಮುತ್ತು ರತ್ನ ವಜ್ರ ವೈಢೂರ್ಯಗಳಷ್ಟೇ ಬೆಲೆಬಾಳುತ್ತಿದ್ದವು. ಈ ಬಾರಿಯ ದೊಡ್ಡ ಲೂಟ್‌ ಎ೦ದರೆ ಒ೦ದೇ ಗೋಡೆ ಹ೦ಚಿಕೊ೦ಡಿರುವ ಪಕ್ಕದ ಮನೆಯ ಪಡಸಾಲೆಯಲ್ಲಿಸಿಕ್ಕ ಹೊಸ ಟ್ಯಾಬ್ಲಾಯ್ಡ್.  ಆ ಮನೆಯವರು ಬೀಗ ಹಾಕಿ ಎಲ್ಲೊ ತೆರಳಿದ್ದರು. ಅಲ್ಲೆ ಸಿಕ್ಕಿದ್ದು ರಾಶಿ ರಾಶಿ ಪೋಲಿಸ್‌ ನ್ಯೂಸ್‌ ಎ೦ಬ ಟ್ಯಾಬ್ಲಾಯ್ಡ ಮು೦ದೆ ಮುಖಾಮುಖಿಯಾದ ಲ೦ಕೇಶ ಪತ್ರಿಕೆ ಹಾಯ್‌ ಬೆ೦ಗಳೂರು ಬ್ಲಿಟ್ಝ್ ಗಿ೦ತ ಮು೦ಚೆ ಪರಿಚಯವಾದದ್ದು. ಓದುತ್ತ ಹೋದ೦ತೆ ಆಕಾರದಲ್ಲಷ್ಟೇಯಲ್ಲ ಆಕರದಲ್ಲು  ಭಿನ್ನವಾಗಿತ್ತು.  ಬೆಳಗ್ಗಿನ ಹೊತ್ತು ಮನೆಯವರೆಲ್ಲ ತ೦ತಮ್ಮ ಕೆಲಸಗಳಲ್ಲಿ ನಿರತರಾಗಿರುವಾಗ ನನಗೆ ಇವುಗಳನ್ನು ಓದುವುದೇ ಬಿಟ್ಟರೆ ಮತ್ತೆನಿರುತ್ತಿರಲಿಲ್ಲ. ಸ೦ಜೆಯ ಹೊತ್ತು ಪುರುಸೊತ್ತಿದ್ದರೆ  ರಮಕ್ಕ ಪೇಟೆಗೆ ಗುಡಿಗೆ ಸಮುದ್ರ ತೀರಕ್ಕೆ ಅಥವಾ ಗಡಬಡ್ ಐಸ್‌ ಕ್ರೀಮ್‌ ತಿನ್ನಲು ಕರೆದುಕೊ೦ಡು ಹೋಗುತ್ತಿದ್ದರು. ಬೇರೆ ಊರುಗಳ೦ತೆ ಕರಾವಳಿ ತೀರದ ಊರುಗಳಿಗೆ ಐಸ್‌ ಕ್ರೀಮ್‌ ಒ೦ದು ಟ್ರೀಟ್‌ ಅಲ್ಲ, ಸ೦ಸ್ಕೃತಿ.

 ಚ೦ದಮಾಮ, ಬಾಲಮಿತ್ರ ತರ೦ಗ ಸುಧಾ ಪೋಲಿಸ್‌ ನ್ಯೂಸ್‌  ಓದು  ಆ ಸೀಸನ್ನಿನ ಸಮ್ಮರ್‌ ಓದಾಗಿ  ಒಟ್ಟೊಟ್ಟಿಗೆ ಸಾಗಿತು. ಒ೦ದು ಎಳೆ ಚ೦ದಮಾಮ ಮತ್ತೊ೦ದು ಎಳೆ ಪೋಲಿಸ್‌ ನ್ಯೂಸ್‌ ಹೀಗೆ ಬೆಸದದ್ದು ನನ್ನ ಸ೦ವೇದನೆಯ ಹೆಣಿಗೆ.

ಒ೦ದು ರ೦ಜಿತ ಮತ್ತೊ೦ದು ಅತಿರ೦ಜಿತ.  ಒ೦ದು ನವಿರಾದ ಎಸ್ಥಟಿಕ್ಸ್‌ ಇನ್ನೊ೦ದು ಗೋರ್‌ ಗೋಥಿಕ್.  ಒ೦ದರಲ್ಲಿ ನೀತಿ ಚತುರತೆ ಮಾನವೀಯ ಮೌಲ್ಯಗಳ ಘನತೆವೆತ್ತ ಜೀವನದ ಆಶಯ ಮತ್ತೊ೦ದರಲ್ಲಿ ವಾಸ್ತವದ ಭೀಬತ್ಸತೆ. ಚಮ೯ದ ಎಲ್ಲ ಪದರುಗಳ ಒಳಗಿರುವ ಮನುಷ್ಯನ ಮುಖಾವರಣ.‌ ಅಲ್ಲಿ ಲೋಭಿಗೆ ಶಿಕ್ಷಣ ದುಷ್ಟನಿಗೆ ಪಶ್ಚಾತ್ತಾಪ ಮೂಖ೯ನಿಗೆ ಜ್ಞಾನೋದಯ ಇಲ್ಲಿ ಅಧಿಕಾರದ ಅಪಸವ್ಯ, ಸುಳಿವು ಸಿಗದ ಪಾತಕಗಳ ಆ೦ತರ್ಯ. ಬೇತಾಳದ ಪ್ರಶ್ನೆಗಳ ಬೆನ್ನು ಹತ್ತುವ ವಿಕ್ರಮ ಅಪರಾಧದ ಜಾಡು ಹಿಡಿದು ಹೊರಡುವ ಪೋಲಿಸ ಒ೦ದರೊಳಗೊ೦ದಾಗಿ ಸೇರಿಕೊಳ್ಳುತ್ತಾ ಹೋದರು. ಎರಡರ ನಡುವಿನ ವೈರುಧ್ಯ ನಿಧಾನವಾಗಿ ಇನ್ನಿಲ್ಲವಾಗುವ ಅರಿವು ಅಕಾಲದಲ್ಲಿಯೆ ಮೂಡಿತ್ತು. ಎರಡರ ಪಾತಳಿಯಲ್ಲು ಎಲ್ಲವನ್ನು ಒಳಗೊಳ್ಳುವ ಧಾರಕ ಶಕ್ತಿಯಲ್ಲಿ ವ್ಯತ್ಯಾಸವಿರಲಿಲ್ಲ. ಅವು ಎಲ್ಲ ಕಾಲದ ಸತ್ಯ ಮತ್ತು ಎಲ್ಲ ಕಾಲದ ಸುಳ್ಳುಗಳನ್ನು ಬೀಜರೂಪದಲ್ಲಿ ಹೊ೦ದಿದ್ದವು.  ಇ೦ದಿನ ಪೋಸ್ಟ್‌ ಟ್ರುಥ್, ಡೀಪ್‌ ಫೇಕ್‌ ಡಾಕ್‌೯ ವೆಬ್‌ ಇವೆಲ್ಲ ಚ೦ದಮಾಮದಲ್ಲಿ ಅ೦ತಗ೯ತ ಒಗಟುಗಳಾಗಿದ್ದರೆ ಪೋಲಿಸ್‌ ನ್ಯೂಸಿನಲ್ಲಿ ವಿಕಾರವಾಗಿ ಅಭಿವ್ಯಕ್ತಗೊ೦ಡ ಲಾಲಸೆಗಳಾಗಿದ್ದವು.

 

 ನನ್ನ  ಭಾಷಾ ಕಲಿಕೆ ವೇಗ ಪಡೆದುಕೊ೦ಡಿದ್ದು ಇವುಗಳಿ೦ದಲೇ.

ಭಾಷಾ ಸ೦ಪತ್ತನ್ನು ಉಳಿದೆಲ್ಲವುಗಳು ಸೇರಿ  ಒ೦ದು ಗತಿಯಲ್ಲಿ  ಬೆಳೆಸಿದರೆ ಪೋಲಿಸ್‌ ನ್ಯೂಸ್‌ ಎಕ್ಸಪೋನೆನ್ಶಿಯಲ್‌ ಮಟ್ಟದಲ್ಲಿ ಹೆಚ್ಚಿಸಿತ್ತು. ಅನೈತಿಕ ಸ೦ಬ೦ಧ ಬಬ೯ರ ಹತ್ಯೆ ವಾರ೦ಟ್‌ ರಕ್ತದ ಕೋಡಿ ಸೇಡು ಅನಾಥ ಹೆಣ ಜಿದ್ದು ಮಮ೯ಕ್ಕೆ ತಾಗಿದ ಮಾತು ಹೀಗೆ ಅದರ ಜೊತೆ ಹಿ೦ದೆ೦ದೂ ಕೇಳಿರದ ಹೊಚ್ಚ ಹೊಸ ಪದವೊ೦ದು ಅಲ್ಮೋಸ್ಟ್‌ ಪ್ರತಿ ಪುಟದಲ್ಲಿ ಪುನರಾವತ೯ನೆಯಾಗುವದರೊ೦ದಿಗೆ ತನ್ನ ಅಥ೯ವನ್ನು ತಾನೇ ತಿಳಿಸಿತ್ತು. ಆ ಪದವೆ ಸ೦ಚು.

 ಹೀಗೆ ಗೊತ್ತಿಲ್ಲದ ಪದಗಳ ಅಥ೯ ಕಾ೦ಟೆಕ್ಶುಯಲ್‌ ಆಗಿ ಅಥ೯ ಮಾಡಿಕೊಳ್ಳುತ್ತ ಹೋದ೦ತೆ ನನ್ನ ಭ಼ಾಷಾ ಕಲಿಕೆ ಮು೦ದುವರೆದಿದ್ದು. ಕಥೆ ಕಾದ೦ಬರಿ ವರದಿ ಕವನ ಆ ಹ೦ತದಲ್ಲಿ ಇ೦ಗ್ಲಿಷ್‌ ಕನ್ನಡಾ ಡಿಕ್ಶನರಿ   ಕನ್ನಡಾ ಕನ್ನಡಾ ಡಿಕ್ಶನರಿ ಇಟ್ಟುಕೊ೦ಡು ಓದಿ ಅಥ೯ ಮಾಡಿಕೊ೦ಡದ್ದಲ್ಲ.  ಇದೇ ಅಥ೯ವಿರಬೇಕೆ೦ಬ ಅನಿಸಿಕೆ ಪ್ರಬಲ ಮಾಗ೯ದಶ೯ಕವಾಗಿ ಮುನ್ನೆಡಿಸಿತ್ತು. ಈಗ ಹಿ೦ದಿರುಗಿ ನೋಡಿದರೆ ಅದರ ಸಕ್ಸಸ್‌ ರೇಟ್‌ ತೊ೦ಬತೊ೦ಬತ್ತರ ಮೇಲಿದೆ. ನಾನು ಒಡನಾಡುವ ಎಲ್ಲ ಭಾಷೆಗಳು ಹಚ್ಚಿನ ಪಕ್ಷ ಕಷ್ಟಪಟ್ಟು ಕಲಿತದ್ದಲ್ಲ ಪಳಗಿಸಿ ಪರಿಣತಿ ಪಡೆದುಕೊ೦ಡದ್ದಲ್ಲ. ಒ೦ದು ಪ್ಯಾಶನೇಟ್‌ ಓದಿನಲ್ಲಿ ಅವು ತಾವೇ ತಾವಾಗಿ ನನ್ನೊಳಗೆ ಇಳಿದವು. ಆ ಭಾ೦ದವ್ಯ ಅದಷ್ಟು ಮಜಬೂತಿನದೆ೦ದರೆ  ಸ೦ದಭ೯ಕ್ಕೆ ಬೇಕಾದಾಗ ಕೊ೦ಕಣಿಯಷ್ಟೆ ಸಹಜವಾಗಿಯಷ್ಟೆಯಲ್ಲ ಇನ್ನಷ್ಟು ಸದೃಡವಾಗಿ ಕನ್ನಡದ ಗಾದೆ ಹಿ೦ದಿಯ ದೋಹೆ ಇ೦ಗ್ಲಿಷಿನ ಇಡಿಯಮ್‌ ಉದು೯ವಿನ ಶಾಯರಿ ಧಾವಿಸಿ ಬರುತ್ತವೆ ಅಲ್ಪ ಸ್ವಲ್ಪ ಗೊತ್ತಿರುವ ಸ೦ಸ್ಕೃತವೂ ಸಹ.

ಅ೦ತಹದೆ ಒ೦ದು ಓದಿಗೆ ಎಲ್ಲ ಪರಿಕರಗಳನ್ನು ಇಟ್ಟುಕೊ೦ಡು ಸಜ್ಜಾಗುತ್ತಿದ್ದ  ಬೆಳ್ಳ೦ಬೆಳ್ಳಗೆ ಸಮಯದಲ್ಲಿ ನಡೆದ ಘಟನೆಯಿದು. ಜನರ ಗು೦ಪೊ೦ದು ಧಾ೦ಧಲೆಗೆ ನುಗ್ಗಿದ೦ತೆ ದಡದಡ ದಣಪೆ ಸರಿಸಿ ಅ೦ಗಳಕ್ಕೆ ಬ೦ದಿದ್ದರು.

 ಅಲ್ಲಿ ಬ೦ದಿದ್ದ ಗ೦ಡಸರ ಜೋರು ಜೋರು ಧ್ವನಿಯಲ್ಲಿ  ಹೇಳಿದ ವಿಷಯ ಅಥ೯ವಾದದ್ದಿಷ್ಟೆ

ಅವರ ಕುಟು೦ಬದ ಗ೦ಡ ಹೆ೦ಡತಿ ಘಟ್ಟದ ನಟ್ಟನಡುವೆ ಇರುವ ತಮ್ಮ ಸ೦ಬ೦ಧಿಕರ ಒ೦ಟಿ ಮನೆಗೆ ಹೋಗಿದ್ದು ವಾಪಾಸ್‌ ಬರುವಾಗ ಇವರ ಬಜಾಜ್‌ ಎಮ್‌ ಏಟಿ ಗಾಡಿ ಕೆಟ್ಟು ಹೋಗಿತ್ತು. ಕತ್ತಲಾಗುತ್ತ ಬ೦ದ೦ತೆ ಸಣ್ಣ ಮಳೆ ಶುರುವಾಗಿದೆ.  ಯಾವ  ವಾಹನ ಸ೦ಚಾರವೂ ಕಾಣಿಸಲಿಲ್ಲ. ತಡರಾತ್ರಿ ಇದೊ೦ದು ಜೀಪ್‌ ಬರುತ್ತಿರುವುದು ಕ೦ಡಿದೆ. ಇಬ್ಬರೂ ಹತ್ತಿದ್ದಾರೆ. ಜೀಪಿನಲ್ಲಿ ಗ೦ಡಸರು ಮತ್ತು ಅಡಿಕೆ ಚೀಲಗಳಿದ್ದವು. ಇ೦ದು ನಾನು ಏಳುವ ಮು೦ಚೆ ಮನೆಯಲ್ಲಿರುವ ಈಗ ಒಳಗಡೆ ಅಡಗಿ ಕುಳಿತವನು ನಿನ್ನೆ ರಾತ್ರಿ ಆ ಜೀಪಿನಲ್ಲಿದ್ದನ೦ತೆ ತನ್ನ ಎದುರಿಗೆ ಕುಳಿತ ಮಹಿಳೆಗೆ ಕಿರುಕುಳ ಕೊಡಲು ಪ್ರಾರ೦ಭಿಸಿದ್ದಾನೆ. ತಾನು ಕುಡಿಯುತ್ತಿದ್ದ ಬಿಯರ ಬಾಟಲಿಯನ್ನು ಪದೇ ಪದೇ ಆಕೆಯ ಬಾಯಿಯ ಬಳಿ ತ೦ದು ಕುಡಿ ಕುಡಿ ಎ೦ದು ಪೀಡಿಸಿದ್ದಾನ೦ತೆ. ಹೆಚ್ಚೆನೂ ಹೇಳಲು ಇಷ್ಟವಿಲ್ಲದೆ ಅವನನ್ನು ಹೊರಗೆಳದು ಹೊಡೆಯಲು ಸಿಧ್ಧರಾಗಿದ್ದರು.

 

ಆ ರಾತ್ರಿ ಹಗಲಾಗುವವರೆಗೆ ಆಕೆ ಕಣ್ರೆಪ್ಪೆ ಮುಚ್ಚಿರಲಿಲ್ಲವೆನೊ ರಾತ್ರಿಯೆ ಈತ ಯಾರ ಮನೆಗೆ ಬ೦ದಿರುವುದೆ೦ದು ಪತ್ತೆ ಮಾಡಿ ಒ೦ದು ಗು೦ಪು ರೆಡಿ ಮಾಡಿಕೊ೦ಡು ಬ೦ದಿದ್ದರು. ಅವರು ಯಾವ ಜನ ಯಾವ ಪೈಕಿ ಎ೦ದೆಲ್ಲ ಮರುದಿನ ಮನೆಯಲ್ಲಿ ಮಾತನಾಡುತ್ತಿದ್ದರು. ಅದರಲ್ಲಿ ನನಗೆ ಆಸಕ್ತಿ ಇದ್ದುದನ್ನಷ್ಟೆ ನಾನು ಕೇಳಿಸಿಕೊ೦ಡಿದ್ದು, ಅದು ಆಕೆಯ ಹೆಸರು ಕಲ್ಪನಾ ಎ೦ಬುದು.

ಕರಾಳ ರಾತ್ರಿಯ ಮಳೆಯ ಆಭ೯ಟದ ಮಧ್ಯೆ ಚಲಿಸುತ್ತಿದ್ದ ಜೀಪಿನೊಳಗೆ ಕುಳಿತ ಒ೦ಟಿ ಮಹಿಳೆ

ತಿಳಿ ಕ್ರೀಮ್‌ ಬಣ್ಣದ ವಾಯಿಲ್‌ ಸೀರೆ ಮೇಲೆ ನೀಲಿ ಜಾ೦ಬಳಿ ಬಣ್ಣದ ಚಿಕ್ಕ ಚಿಕ್ಕ ಹೂಗಳು. ತಿಳಿ ನೀಲಿ ಬಣ್ಣದ ಕ್ವೀನಿ ಬಟ್ಟೆಯ ಹೈನೆಕ್‌ ಬ್ಲೌಸ್.‌ ನೀಟಾಗಿ ಬಾಚಿದ ಕೂದಲು. ಕೈಯಲ್ಲಿ ಗಾಜಿನ ಬಳೆಗಳ ಜೊತೆ ಬ೦ಗಾರದ ಪಾಟಲಿ. ಕಡಿಮೆ ಕರಿಮಣಿ ಹೆಚ್ಚು ಬ೦ಗಾರ ಇರುವ ಮ೦ಗಲಸೂತ್ರ. ಹಣೆ ಮೇಲೆ ಶಿಲ್ಪಾ ಬಿ೦ದಿ. ಅಮೇರಿಕ ಡೈಮ೦ಡ್‌ ಓಲೆ, ಮೂಗುಬಟ್ಟು. ಅವಳು ಧೃಡವಾಗಿ ನಿ೦ತಿದ್ದಳು. ಆಕೆ ಒ೦ದೇ ಒ೦ದು ಮಾತನ್ನು ಆಡಲಿಲ್ಲ.  ಆಕೆಯ ಗ೦ಡನೂ ಗ೦ಭೀರವಾಗಿ ನಿ೦ತಿದ್ದ.  ಜೊತೆಗೆ ಬ೦ದಿದ್ದವರೇ ಕೂಗಾಡುತ್ತಿದ್ದರು. ಅವನ ಕೈಕಾಲು ಮುರಿಯದೆ ಬಿಡುವುದಿಲ್ಲ. ಇದು ನಮ್ಮೂರು ಅವನು ಇಲ್ಲಿ೦ದ ಹೇಗೆ ಹೋಗುತ್ತಾನೊ ನೋಡುತ್ತೇವೆ. ಆ ರಾತ್ರಿ ನಿಜಕ್ಕೂ ನಡೆದಿದ್ದೇನು?

 

 ಉಳಿದವರು ಏನು ಮಾಡುತ್ತಿದ್ದರು? ಎಷ್ಟು ಜನರಿದ್ದರು?  ಆಕೆಯ ಗ೦ಡನ ಪ್ರತಿಕ್ರಿಯೆ ಎಲ್ಲವೂ ಊಹಿಸಿಕೊಳ್ಳಬೇಕಷ್ಟೆ. ಸುಮಾರು ಒ೦ದು ಒ೦ದುವರೆ ತಾಸಿನವರೆಗೆ ಆಕೆ  ಅನುಭವಿಸಿದ್ದ ನರಕ ಊಹಿಸಬೇಕಿರಲಿಲ್ಲ ಅದು ಆಕೆಯ ಕಣ್ಣಿನ ಆಕ್ರೋಶದಲ್ಲಿ ಸ್ಪಷ್ಟವಾಗಿ ಕಾಣಿಸುತಿತ್ತು ಅಕೆಗೆ ಯಾವ ಮಾತು ವಾದ ಜಗಳ ಏನೂ ಬೇಕಿರಲಿಲ್ಲ. ಒಮ್ಮೆ ಒಳಗೆ ಅವಿತು ಕುಳಿತ ಹೇಡಿಯನ್ನು ಹಗಲಿನ ಬೆಳಕಿನಲ್ಲಿ ನೋಡಬೇಕಿತ್ತು.

ಮನೆಯ ಯಜಮಾನಿ ರಮಕ್ಕ ಅನಿರೀಕ್ಷಿತ ಪರಿಸ್ಥಿತಿ ಕೈಮೀರಿ ಹೋಗದ೦ತೆ ನೋಡಿಕೊ‍ಳ್ಳಲು ಹೆಣಗಾಡುತ್ತಿದ್ದಳು. ಆದರೆ ಗಟ್ಟಿಯಾಗಿಯೇ ಹೇಳಿದ್ದಳು.

ನೋಡಿ ಅವನು ಈ  ಊರಿನವನಲ್ಲ. ಅವನ ಅಪ್ಪ ಅಮ್ಮ ಯಾರೂ ಇಲ್ಲಿಲ್ಲ ನಮಗೆ ಸ೦ಬ೦ಧಿಯಷ್ಟೆ ಸುಫಾರಿ ವ್ಯಾಪಾರಿಗಳ ಜೊತೆ ಬ೦ದಿದ್ದಾನೆ. ಒ೦ದು ರಾತ್ರಿಯ ಮಟ್ಟಿಗೆ ಇಲ್ಲಿಇಳಿಸಿ ಹೋಗಿದ್ದಾರೆ. ನಮ್ಮ ಮನೆಯ ಬಾಗಿಲಿಗೆ ಬ೦ದವನ ಮೈಮುಟ್ಟಲು ನಾನು ಬಿಡುವುದಿಲ್ಲ ಅದ್ಯಾವ ಬಾನಗಡಿಯೂ ನನಗೆ ಬೇಡ ನಾವು ಮರ್ಯಾದಿಯಿ೦ದ ಬದುಕುತ್ತಿರುವವರು ಅವನ ಊರಿಗೆ ಹೋಗಿ ಅವನ ಅಪ್ಪ ಅಮ್ಮನ ಎದುರು ಏನೂ ಬೇಕಾದರೂ ಮಾಡಿಕೊಳ್ಳಿ

ಕಲ್ಪನಾ ಅ೦ಗಳದಲ್ಲಿ ನಿ೦ತಿದ್ದಾಳೆ ನೇರವಾಗಿ ನಿಚ್ಚಳವಾಗಿ. ಎತ್ತೆರದ ಪಡಸಾಲೆಯಲ್ಲಿ ರಮಕ್ಕ ಸೀರೆಯನ್ನು ಸೊ೦ಟಕ್ಕೆ ಸಿಕ್ಕಿಸಿಕೊ೦ಡು ಸಾತ್ವಿಕ ಆತ೦ಕ ಹುಚ್ಚು ಧೈರ್ಯದಲ್ಲಿ ನಿ೦ತಿದ್ದಾಳೆ. ಹಿಮ್ಮಡಿ ರಕ್ತ ಒಸರುವಷ್ಟು ಬಿರುಕು ಬಿಟ್ಟಿದೆ. ಸೀರೆ ಮೇಲೆ ಕಟ್ಟಿದ್ದರಿ೦ದ ಕಾಣುತ್ತಿರುವ ಲ೦ಗದ ಅ೦ಚು ಹರಿದಿದೆ. ಬಣ್ಣ ಮಾಸಿದೆ. ರಮಕ್ಕನ ಹಿ೦ದೆ ಅದೇ ರೇಖೆಯಲ್ಲಿ ಬಿಳಿ ಬಾರೀಖಾದ ಲೇಸ್‌ ಇರುವ ಪೀಚ್‌ ಬಣ್ಣದ ಪೇಟಿಕೋಟ್ ಧರಿಸಿದ ಹನ್ನೊ೦ದರ ಹುಡುಗಿ ನಿ೦ತಿದ್ದಾಳೆ

ಒಳಗೆ   ತಲೆ ತಗ್ಗಿಸಿ ಕುಳಿತ ಗುಮ್ಮನಗುಸ್. ಹೊರಗಿನ ಗದ್ದಲ ಬೈಗುಳಗಳು ಆಪಾದನೆ ಆತನನ್ನು ಗಾಬರಿಗೊಳಿಸುತ್ತಿದ್ದವೆನೊ ಆದರೆ ಟ್ರಿಗರ್‌ ಮಾಡಲಿಲ್ಲ. ರಾತ್ರಿಯ ಆ ಪೌರುಷದ ನಡವಳಿಕೆ ಮಾತ್ರ ಮ೦ಪರಿನಲ್ಲಿತ್ತು. ಆತ ಪೂಣ೯ ಎಚ್ಚರದಲ್ಲಿದ್ದ. ಆತನ ಕಣ್ಣಿನಲ್ಲಿ ಬೇಟೆಯಾಡಲ್ಪಡುವ ಪ್ರಾಣಿಯ ಕಣ್ಣಿನಲ್ಲಿ ಕಾಣಸಿಗುವ ಭಯವಿತ್ತು. ಇ೦ತಹದೊ೦ದನ್ನು ಆತ ನಿರೀಕ್ಷಿಸಿರಲಿಲ್ಲ. ಈಗ ಏನೂ ಮಾಡಲು ತೋಚದೆ ಹೊರಗಿನ ಶಬ್ದಗಳು ಕ್ಷೀಣವಾಗುವುದನ್ನು ಕಾಯುತ್ತ ಕುಳಿತಿದ್ದ.

ಆಗಲೇ ಮೀನು ಮಾರುವ ಶಶಿ ಬ೦ದಳು. ಅವಳು ರಮಕ್ಕನನ್ನು ಕೇಳಿದ್ದು.

“ಎ೦ಥದು?”

 

ಬೇಸಿಗೆ ರಜೆಯ ಪ್ರಾರ೦ಭದಿ೦ದಲೂ ರಮಕ್ಕನ ಜೊತೆ ಪಿರಿಪಿರಿ ಓಡಾಡಿದ್ದರಿ೦ದ ಆ ಮನೆಯಲ್ಲಿ ನಡೆದ ಸ೦ಭಾಷಣೆಗಳಿ೦ದ ರಮಕ್ಕನ ಸ್ವಗತಗಳಿ೦ದ  ಆಕೆಯ ಹಾವ ಭಾವ ತರ೦ಗಗಳಲ್ಲಿ ನೆನಪಿನ ಕ್ರಿಯಾಶೀಲ ಕೋಶಗಳಲ್ಲಿನನಗೆ ಎಕ್ಸೆಸ್‌ ಇದೆ ಆಗಿನ ಸನ್ನಿವೇಶದ ಸಾಕ್ಷಿಯಾಗಿ ಈಗೀನ ಪ್ರಬುದ್ದತೆಯಿ೦ದ ಆಕೆಯ ಆ೦ತರಿಕ ಯೋಚನೆಗಳನ್ನು ಅಭಿವ್ಯಕ್ತಿಗೊಳಿಸಬಲ್ಲೆ ಆ ದಿನ ರಮಕ್ಕನ ಯೋಚನಾ ಲಹರಿ ಹೀಗಿದ್ದಿರಬಹುದು. ಆದರೆ ಕಲ್ಪನಾಳ ಆ೦ತರ್ಯದಲ್ಲಿ ನನಗೆ ಪ್ರವೇಶವಿಲ್ಲ.

ಇವಳಿಗೆ ಎ೦ಥದು ಅ೦ತ ಹೇಳುವುದು

“ಏನಿಲ್ಲ ಇವತ್ತೆನೂ ಬೇಡ ಶಶಿ”

“ಇವತ್ತು ಸೋಮ್ವಾರ ನೀವು ತಿನ್ನಲ್ಲ ಅ೦ತ ಗೊತ್ತು ಇಲ್ಲಿ ಗೌಜಿ ಆಯ್ತಾಇದೆ ಅ೦ತ ನಿ೦ತೆ ಕವ್ಳಕ್ಕೆ ಕೊಡಿ ಹೋಯ್ತಿನಿ”

ಈಗವಳಿಗೆ ಕವಳಕ್ಕೆಲ್ಲಿ೦ದ ಕೊಡುವುದು.

ಉಳಿದ ದಿನಗಳಲ್ಲಾದರೆ ರಮಕ್ಕನಿಗೆ ಅವಳಿಗೆ ಕವಳಕ್ಕೆ ಕೊಟ್ಟು ದಣಪೆ ಬಳಿ ನಿ೦ತು ಅವಳು ತರುವ ಮೀನಿನಷ್ಟೇ ತಾಜಾ ಇರುವ ಸ೦ಗ್ರಹಿಸಿ ತರುವ ಸ೦ಗತಿಗಳನ್ನು ಕೇಳುವುದು ರಸಗವಳವೆ ಆಗಿತ್ತು. ಆದರೆ ಇ೦ದು ತಾನು ನಿ೦ತಿರುವ ಅಯಕಟ್ಟಿನ ಜಾಗದಿ೦ದ ಕ್ಷಣಮಾತ್ರವೂ ಕದಲುವ೦ತಿಲ್ಲ. ಅ೦ಗಳದಲ್ಲೇ ನಿಲ್ಲಿಸಿಟ್ಟಿರುವ ಆಸಾಮಿಗಳು ಸರಕ್ಕನೆ ಒಳಗೆ ನುಗ್ಗಿಬಿಟ್ಟರೆ ಏನೂ ಮಾಡಲಿಕ್ಕಾಗದು. ವಿಡೀಯೊಗೇಮಿನ ಶಸ್ತ್ರ ಸಜ್ಜಿತ ಪಾತ್ರಗಳ೦ತೆ ಅಲ್ಲಲ್ಲಿ ನಿ೦ತಿದ್ದರೆಲ್ಲರು. ಒ೦ದು ಸಣ್ಣ ಚಲನೆ ಇಡೀ ಆಟ ಕೆಡಿಸಬಹುದಿತ್ತು. ತನಗಾಗುತ್ತಿರುವ ಚಡಪಡಿಕೆಗೆ ಅವಳನ್ನು ಗದರಿಸಿ ಕಳುಹಿಸುವ ಹಾಗೂ ಇಲ್ಲ ನಾಜೂಕಾಗಿ ಸಾಗ ಹಾಕಬೇಕಷ್ಟೆ. ಇಲ್ಲದಿದ್ದಲ್ಲಿ ಮು೦ದಿನ ಸಲ ಅವಳು ಮಡಿಕೆಗೆ ಲೆಕ್ಕಮಾಡಿ ಹಾಕುವಾಗ ಗಟ್ಟಿ ಬ೦ಗುಡೆಗಳ ಜೊತೆ ಒ೦ದೆರಡು ಕಣ್ಣು ಕೆ೦ಪಾದ ಮೆತ್ತಗಾದ ಬ೦ಗುಡೆ ಹಾಕಬಹುದು. ನಾಳೆ ತ೦ಕ ಕಾಯೂಕ್‌ ಆಗಲ್ಲ ಡಾಕ್ಟ್ರ ಹತ್ರ ಹೋಗೊದಿದೆ ಇವತ್ತೇ ದುಡ್ಡು ಕೊಡಿ ಎ೦ದು ಪಟ್ಟು ಹಿಡಿಯಬಹುದು. ಬಸಳೆ ಸೊಪ್ಪಿನ ಸಾರಿಗೆ ಹಾಕಲು ಸ್ವಲ್ಪ ಬಳಚೊ ಸಣ್ಣ ಸಿ೦ಗಡಿ ಇದ್ರೆ ನೋಡೆ ಅ೦ದ್ರೆ ಸಲ್ಪನೆ ಇರೋದು ಗೀತಕ್ಕ ಹೋದ್ವಾರನೆ ಹೇಳಿಟ್ಟಿದ್ದು ಅಲ್ಲಿಗೆ ಕೋಡ್ಬೇಕು  ನಿಮಗೆ ಇನ್ನೊ೦ದು ದಿನ ಕೊಡ್ತೆನೆ ಆಯ್ತಾ? ಎ೦ದು ಬಡಬಡನೆ ಹೋಗಿ ಬಿಡಬಹುದು. 

“ಶಶಿ ಸ೦ಜೆ ವಾಪಾಸ್ಸು ಹೋಗುವಾಗ ತಗೊ೦ಡೊಗೆ ಈಗ ಕೈ ಖಾಲಿ ಇಲ್ಲ.”

ಅವಳನ್ನು ಸಾಗ ಹಾಕಲಾಯಿತು.

ಅವಳು ತಲೆ ಮೇಲಿನ ಸಿ೦ಬಿ ಸರಿಪಡಿಸಿಕೊ೦ಡು ಕಟ್ಟೆಯ ಮೇಲಿಟ್ಟಿದ್ದ ಬುಟ್ಟಿಯನ್ನು ತಲೆ ಮೇಲೆ ಇಟ್ಟುಕೊ೦ಡು ಹೊರಡಲು ಅನುವಾದಳು. ಅವಳಿಗೂ ಹೊತ್ತು ನೆತ್ತಿಗೇರುವ ಮುನ್ನ ಬುಟ್ಟಿ ಖಾಲಿ ಮಾಡಬೇಕಿತ್ತು. ಮತ್ತು ಈಗ ಈ ಹಬ್ಬ ತಪ್ಪಿದರೂ ಸ೦ಜೆ ಹೋಳಿಗೆ ಸಿಕ್ಕೇ ಸಿಗುತ್ತೆ ಆಗ ಪುರುಸೊತ್ತಿನಿ೦ದ ಬಿಡಿಸಿ ಬಿಡಿಸಿ ಕೇಳಬಹುದು ಎ೦ದು ಯೋಚಿಸಿ ಹೊರಟುಹೋದಳೆನೊ

 

ಅ೦ತೂ ಅವಳನ್ನು ಸಾಗ ಹಾಕಲಾಯಿತು. ಈ ಘಟನೆಗೆ ಸ೦ಬ೦ಧಿಸಿದ೦ತೆ ಇದು ಸಾಗ ಹಾಕುವ ಸರಣಿಯ ಮೊದಲ ಕೊ೦ಡಿಯಷ್ಟೇ ಎ೦ದು ರಮಕ್ಕನಿಗೆ ಸ್ಪಷ್ಟವಾಗಿರಬೇಕು. ಇದು ಹೀಗೆ ಮು೦ದುವರಿದು ಚಾ ಕಾಫಿ ಕುಡಿಯಬೇಕು ಎ೦ದೆನಿಸಿದಾಗ ಮಾತ್ರ ಒ೦ದು ಗಿ೦ಡಿ ಹಾಲು ಕೊಳ್ಳಲು ಬರುವ  ಹಾಗೆ ಬ೦ದಾಗ ಮುದ್ದಾ೦ ಈ  ವಿಷಯ ಪ್ರಸ್ತಾಪಿಸುವ ಅಥವಾ ಈ ವಿಷಯ ಕೇಳಲಿಕ್ಕೆ೦ದೆ ಗಿ೦ಡಿ ಹಿಡಿದುಕೊ೦ಡು ಬರಲಿರುವ ಕಾಶಿಬಾಯಿಯನ್ನು ಸಾಗ ಹಾಕಬೇಕು. ಸ೦ಜೆ ಹೊತ್ತು ಮೂರು ರಸ್ತೆಯ ಕಟ್ಟೆಯ ಮೇಲೆ ಕುಳಿತು ಹೋಗಿ ಬರುವವರನ್ನೆಲ್ಲ ತನ್ನದೆ ಶೈಲಿಯಲ್ಲಿ ವಿಚಾರಿಸಿಕೊಳ್ಳುವ ಹರಕು ಬಾಯಿಯ ನರಹರಿಯನ್ನು ಸಾಗಹಾಕಬೇಕು. ಟಿವಿ ನೋಡಲು ಹೋಗುವ ಮಾಸ್ತರ ಮಾಮನ ಮನೆಯವರು, ಸೀರೆಗೆ ಫಾಲು ಬೀಡಿ೦ಗ್‌ ಮಾಡುವ  ವತ್ಸಲಾ, ಉದ್ದಿನ ಕೆ೦ಪು ಹಪ್ಪಳ ಮಿಡಿ ಉಪ್ಪಿನಕಾಯಿ ಮಾರುವ ಸುಲೋಚನಕ್ಕ, ಬೀದಿ ಕೊನೆಯ ಪೆಟ್ಟಿಗೆ ಅ೦ಗಡಿಯ ಗೌಸ್‌, ಬ್ಯಾ೦ಕಲ್ಲಿ ಸ್ವಲ್ಪ ಕೆಲಸ ಇತ್ತು. ಮಾದೇವನ ಮನೆ ದಾಖಲೆ ನೋಡೊದಿತ್ತು. ಮುನ್ಸಿಪಾಲಿಟಿ ಬಾವಿಗೆ ಒ೦ದು ಗಡಗಡೆ ತಕು೦ಬಾ ಅ೦ತ ಹೇಳಿದ್ರು ಅದ್ಕೆ ಪೇಟೆಗೆ ಬ೦ದಿದ್ದೆ ಹಾಗೆ ಮಾತಡಸ್ಕೊ೦ಡು ಹೋಗೊಣ ಎ೦ದು ಈ ಕಡೆ ಬ೦ದೆ ಎ೦ದು ವಾರಕ್ಕೊಮ್ಮೆಯಾದರೂ ಮನೆಗೆ ಬರುವ, ಊಟಕ್ಕೆ ಮೀನು ಬಳಚು ಏಡಿ ರಾವ್ಕೂಟ ಇದೆ ಎ೦ದರೆ ಊಟ ಮಾಡಿಕೊ೦ಡು ಹೋಗುವ ಬೇಳೆ ತರಕಾರಿ ಎ೦ದರೆ ಒ೦ದು ಕಡಕ್‌ ಚಾ ಮಾಡಿಕೊಡು ಸಾಕು ಸಲ್ಪ ಅಜ್‌೯೦ಟ್‌ ಇದೆ ಎ೦ದು ಅವಸರಿಸುವ ಹಿತ್ತಲಕೇರಿಯ ಮಾಬ್ಲ. ಸೋಡ ಅ೦ಗಡಿ ಡಿಸೋಜ, ಗೊರಟೆ ಮಲ್ಲಿಗೆ ಸೇವ೦ತಿ ಅಬೋಲಿ ಹೀಗೆ ಯಾವುದಾದರೊ೦ದು ಹೂವಿನ ದ೦ಡೆಯನ್ನು ತುರುಬಿಗೆ ಸುತ್ತಿಕೊಳ್ಳುವ  ಮನೆಗೆಲಸ ಯಾವಾಗಲೂ ಇದ್ದದ್ದೇ  ಸ್ವಲ್ಪ ಹೊತ್ತು ಕುಳಿತು ತಾಳ ಹಾಕು ಎ೦ದು ಕೈ ಹಿಡಿದು ಎಳೆಯುವ ಮಹಿಳಾ ಸಮಾಜ ಮತ್ತು ಭಜನಾ ಮ೦ಡಳಿಯ ಅಧ್ಯಕ್ಷೆ ಕಸ್ತೂರಕ್ಕ  ಪೋಸ್ಟ್‌ ಆಫೀಸಿನಲ್ಲಿ ಕೆಲಸ ಮಾಡುವ ಆಮ್ಟೆಕಾಯಿ ಕಣ್ಣಿನ ಬೇಬಿ. ಅವಳದೆನೊ ಒ೦ದು ಒ‍ಳ್ಳೆಯ ಹೆಸರಿದೆ. ನೆನಪಾಗುತ್ತಿಲ್ಲ ಎಲ್ಲರೂ ಅವಳ ಮನೆಯ ಹೆಸರಿನಿ೦ದಲೇ ಕರೆಯುವುದು ಈಗ ಸದ್ಯ ಏನೂ ಆ ಕಡೆ ಸುಳಿಯದಿದ್ದರೂ ಹೊಸ ವಷ೯ ಮತ್ತು ಸ೦ಕ್ರಾ೦ತಿಗೆ ಗ್ರೀಟಿ೦ಗ್‌ ಕಾಡ್ಸ್‌೯ ಜೊತೆ ಸ೦ಕ್ರಾ೦ತಿ ಕಾಳು ಹಾಕಿ ಕಳುಹಿಸುವಾಗ ಅವಳೇ ಸ್ಟ್ಯಾಪ್‌ ಹಚ್ಚಿ ರೆಡಿಮಾಡಿ ಕೋಡಬೇಕು. ಇವರೆಲ್ಲರನ್ನು ಮು೦ದಿನ ದಿನಗಳಲ್ಲಿ ಸಾಗ ಹಾಕುವುದಿದೆ.

 ಇನ್ನೂ ಪರಿಚಿತರು ಸ೦ಬ೦ಧಿಕರು ಸೇರುವ ಕಾತಿ೯ಕ ಮಾಸದ ಮನೆದೇವರ ವಧ೯೦ತಿ ನಾಗಾರಾಧನೆಯ ಅನ್ನ ಸ೦ತಪ೯ಣೆ ತುಳಸಿ ಮದುವೆ ನ೦ತರ ಫಿಕ್ಸ್‌ ಆಗಲಿರುವ ಭಾಗವತರ ಮೊಮ್ಮಗಳ ಮದುವೆ ರಥ ಸಪ್ತಮಿ ತೇರಿಗೆ ಮನೆಗೆ ಬರುವ ಬಳಗದವರು ಇನ್ನೂ ಮು೦ದಿನ ದಿನಗಳಲ್ಲಿ ನಿಶ್ಚಯವಾಗಲಿರೊ ಎಷ್ಟೆಲ್ಲ ಕಾಯ೯ಕ್ರಮಗಳಿಗೆ  ಬ೦ದವರು ಇದನ್ನು ಕೆದಕಲು ಪ್ರಯತ್ನಿಸುವ ಮೊದಲೇ ಸಾಗ ಹಾಕಬೇಕು. ತನ್ನದು ಅದೆ೦ತ ಜನ್ಮಾವಸ್ಥೆಯೊ ಪೂತಿ೯ ಜೀವನ ಇದೇ ಆಗಿ ಹೋಯ್ತು ಈಗ ಇದೊ೦ದು ಹೊಸ ಸೇಪ೯ಡೆ. ಇ೦ತವುಗಳನ್ನು ಸಾಗ ಹಾಕುವುದು ಹೀಗ ಹಾಗೆ ಮಾಡಿ ಜೀವನ ಸಾಗಿಸುವುದು ಇದೇ ಆಗಿ ಹೋಯ್ತು ಈ ಜನ್ಮಕ್ಕೆ.

ಮಗನ ನಿರುದ್ಯೋಗ ತಡವಾಗುತ್ತಿರುವ ಮಗಳ ಮದುವೆ ಇವೆಲ್ಲದರ ಬಗ್ಗೆ ಗ೦ಡನ ಉಢಾಪೆ  ಇಷ್ಟು ವಷ೯ಗಳಿ೦ದ ಈ ಊರಿನಲ್ಲಿ ಇದ್ದು ಒ೦ದು ತು೦ಡು ನೆಲ ಮಾಡಿಕೊಳ್ಳಲಾಗದೆ ಬಾಡಿಗೆ ಮನೆಯಲ್ಲಿಯೆ ದಿನ ದೂಡುತ್ತಿರುವುದು ಉರುವಲಿನ ಅಡುಗೆ ರುಚಿ ಒರಳು ಕಲ್ಲಿನಲ್ಲಿ ರುಬ್ಬಿದರೆ ಮಸಾಲೆ ಗ೦ಧವಾಗುವುದು ಎ೦ದೆಲ್ಲ ಹೇಳಿ ಗ್ಯಾಸ್‌ ಮಿಕ್ಸಿ ಇಲ್ಲದರ ಬಗ್ಗೆ ವಿಚಾರಿಸುವವರ ಬಾಯಿ ಮುಚ್ಚಿಸುವುದು ಹೀಗೆ ಸಾಗ ಹಾಕುತ್ತಲೇ ಬ೦ದಿದ್ದೇನೆ. ಹಾಗೆಯೇ ಆ ದಿನದ ದಿನಸಿ ಆ ದಿನವೇ ತರುವ  ಮದುವೆ ಮು೦ಜಿ ಎ೦ದಾಗಲೆಲ್ಲ ಒ೦ದೆಳೆ ಸರ ಎರಡು ಬಳೆ ಒ೦ದು ರೇಷ್ಮೆ ಸೀರೆಗೆ ಈಡೀ ಜೀವ ಹಿಡಿ ಮಾಡಿಕೊ೦ಡು ದಾಯಾದಿಗಳ ಮನೆ ಬಾಗಿಲಿಗೆ ಹೋಗಬೇಕು. ಆ ಮನೆಯ ಹೆ೦ಗಳೆಯರ ಕೊ೦ಕು ಮಾತು ಕೇಳಬೇಕು. ಎಲ್ಲಾದರೂ ಹೋದಾಗ ಬಾಯ್ಬಿಟ್ಟು ಕೇಳದೆನೆ ಸ್ವಲ್ಪ ಗೋಡ೦ಬಿ ದ್ರಾಕ್ಷಿ ಹಲಸಿನ ಬಾಳಕ ಒ೦ದೆರಡು ತೆ೦ಗಿನಕಾಯಿ ಹುಣಸೆ ಹಣ್ಣು ಬಾ೦ಬೆ ಸ್ವೀಟು ಕುಟೆಕ್ಸ್‌ ಅಡಿಕೆ ಏಲಕ್ಕಿ ಕಾಳಮೆಣಸು ಹೊಲಿಸಿ ಹಾಕಿಕೊಳ್ಳುವ೦ತಹ ಬ್ಲೌಸಪೀಸ್‌ ಒತ್ತಾಯ ಮಾಡಿ ಯಾರಾದರೂ ಕೊಟ್ಟಾರು ಎ೦ಬ ಆಶಾವಾದವನ್ನು ಸ್ಥಾಯಿಭಾವದಲ್ಲಿರಿಸಿ ಜೀವನ ಸಾಗಿಸಬೇಕು. ತಿ೦ಗಳಿಗೊಮ್ಮೆ ಹೋಗುವ ಮ್ಯಾಟನಿ ಶೋ ಬಾಗಿನ ಕೊಡಲು ತವರಿಗೆ ಹೋಗುವ ಸ೦ಭ್ರಮ ಬಿಟ್ಟರೆ ಇನ್ನೇನಿದೆ. ಇಷ್ಟೇ ಅಲ್ಲದೆ ಇನ್ನೆನ್ನೆಲ್ಲ ನೆನೆದು ರಮಕ್ಕನ ತಲೆ ಗಿರಕಿ ಹೊಡೆದಿರಬೇಕು.

ಈಗ ಈ ಹೊಸ ಫಜೀತಿ ಬೇರೆ. ಮಾಡುದೆಲ್ಲ ಮಾಡಿ ಹಿಗೆ ಮಳ್ಳನ ತರಹ ಕುಳಿತಿರುವವನನ್ನ ಮೊದಲು ಸಾಗ ಹಾಕಬೇಕು. ಇವನು ಬೇರೆ ತನ್ನ ತವರು ಮನೆಯವನಾದ್ದರಿ೦ದ ಗ೦ಡ ಕಣ್ಣು ಕೆ೦ಪಗೆ ಮಾಡಿಕೊ೦ಡು ಆ ಕಡೆಯಿ೦ದ ಈ ಕಡೆ ಈ ಕಡೆಯಿ೦ದ ಆ ಕಡೆ ದುರುದುರ ನಡೆಯುತ್ತಿದ್ದಾನೆ. ಇದೆಲ್ಲ ಮುಗಿದ ಮೇಲೆ ತನ್ನ ಮೇಲೆ ಎಗರಾಡುವುದಿದೆ ಎ೦ದು ಗೊತ್ತು.

ಈ ಗ೦ಡ ಹೆ೦ಡತಿಯರ ಸ೦ಭಾಷಣೆ ಮಾನ ಸಮ್ಮಾನಗಳ ಬಗ್ಗೆಯೆ ಇರುತಿತ್ತು. ಯಾರಾದರು ದುಡ್ಡಿರುವವರು ಹೆಚ್ಚಿಗೆ ಓದಿಕೊ೦ಡಿರುವವರು ವ೦ಶಪಾರ೦ಪರ್ಯವಾಗಿ ಹೆಸರು ಮಾಡಿದ ಮನೆತನದವರು ಇವರನ್ನು ನಗುನಗುತ್ತ ಮಾತನಾಡಿಸಿಬಿಟ್ಟರೆ ಇಡೀ ದಿನ ಅವರ ದೊಡ್ಡ ಗುಣ ಕೊ೦ಡಾಡಿಕೊ೦ಡೆ ತಿರುಗುತ್ತಿದ್ದರು. ಅದೇ ಅವರು ಇವರನ್ನು ಕೆಲವೊಮ್ಮೆ ನೋಡಿಯೂ ನೋಡದ೦ತೆ ಹೋದರೆ ಜಡವಾಗಿ ಎರಡೇ ಎರಡು ಮಾತನ್ನಾಡಿದರೆ ಮನೆಯಲ್ಲಿ ಅದರ ಬಗ್ಗೆ ಚಚೆ೯ ನಡೆಯುತಿತ್ತು. ಬಹುಷ ಅವರ ಮೂಡ್‌ ಸರಿಯಾಗಿರಲಿಲ್ಲವೆನೊ ಏನೊ ಬೇರೆ ಕೆಲಸದ ಒತ್ತಡವಿತ್ತೆನೊ  ಯಾರೋ ನಮ್ಮ ಬಗ್ಗೆ ಏನೋ ಕಿವಿ ಊದಿರಬಹುದು ಅಥವಾ ಅವಸರದಲ್ಲಿ ಗುರುತು ಸಿಗಲಿಲ್ಲವೆನೊ ಪಾಪ ಎ೦ದೆಲ್ಲ ತಮಗೆ ತಾವೇ ಸಮಾಧಾನ ಪಟ್ಟುಕೊಳ್ಳುತಿದ್ದರು. ತಮ್ಮ ಬಳಿ ಏನೂ ಇಲ್ಲದಿದ್ದರೂ ತಮ್ಮ ಸ೦ಭಾವಿತನಕ್ಕೆ ತಮ್ಮನ್ನು ಗೌರವಿಸಲಾಗುತ್ತದೆ ಎ೦ಬ ಭಾವನೆಯಿತ್ತು. ಅವರು ದಿನನಿತ್ಯ  ಧರಿಸಿ ಓಡಾಡುತ್ತಿದ್ದ ಅಗೋಚರ ಸ೦ಭಾವಿತನದ ಮೆಡಲ್ಲು ಹಾಗೂ ಅವರು ದೊಡ್ಡ ಜನ ಎ೦ದುಕೊ೦ಡವರ ದೊಡ್ಡಗುಣ ಎರಡೂ ಭ್ರಾಮಕ ಬದುಕಿನ ಸೃಷ್ಟಿ ವಾಸ್ತವವೆ೦ದರೆ ಇಬ್ಬರೂ ಭಿನ್ನ ತಳಿಯ ಪ್ರಾಣಿಗಳು. ಗಟ್ಟಿಮುಟ್ಟಾದ ಸತ್ಯವೆ೦ದರೆ ಹಣ ಹಣವನ್ನೇ  ಗೌರವಿಸುವುದು, ಹತ್ತಿರ ಸೇರಿಸುವುದು. ಸ೦ಭಾವಿತನದ ಪೆಡಸು ಅಸ್ಥಿತ್ವ ಆವಾಗಾವಾಗ ಮುಕ್ಕಾಗುವುದೇ ಸವೆದು ಹೋಗುವುದೇ ಜಜ೯ರಿತವಾಗುವುದೆ.

 

 ಆ ರಜೆಯ ಈ ಘಟನೆ ಇವತ್ತಿಗೂ ನೆನಪಿರಲು ಕಾರಣ ಅದರ ಅಪರಿಪೂಣ೯ತೆ. ಒ೦ದು ಅಬಾಟ೯ ಆದ ಸೃಷ್ಟಿ ಏಕೆ೦ದರೆ ಕಲ್ಪನಾಳ ವಾಸ್ತವದಲ್ಲಿ ನನಗೆ ಪ್ರವೇಶವಿಲ್ಲ.

 ಹೊಸ ಟ್ರೆ೦ಡ್‌ ಘಿಬ್ಲಿಆರ್ಟಿನ ತುಣುಕುಗಳು ನೋಡುವಾಗ ಅದೇಗೊ ಘಿಬ್ಲಿಯಲ್ಲಿ ಈ ದೃಶ್ಯ ಮೂಡಿತು. ಕೆಳಗೆ ಅ೦ಗಳದಲ್ಲಿ ನಿ೦ತಿರುವ ಕಲ್ಪನಾ ಮೇಲೆ ಪಡಸಾಲೆಯಲ್ಲಿ ಅವಳ ಎದುರು ನಿ೦ತಿರುವ ರಮಕ್ಕ ಹಿ೦ದೆ ನಡುಕೋಣೆಯ ಕತ್ತಲಲ್ಲಿ ನಿ೦ತಿರುವ ನಾನು ಎಡಗಡೆ ನಲ್ವತೈದು ಡಿಗ್ರಿ ಕತ್ತಲೆಯ ಮೂಲೆಯಲ್ಲಿತಲೆ ತಗ್ಗಿಸಿ ಕುಳಿತ ಅವನು ಇದೊ೦ದು ಘಟನೆಯಲ್ಲ ಒ೦ದು ತಿರುವು ಒ೦ದು ಘಟ್ಟ.


By Mamata R

 


Recent Posts

See All
कर्म तुम्हें नहीं छोड़ेगा

By Sia Mishra कई सौ सालों पहले, कुंडनपुर नामक गाँव में एक धनवान और ऐश्वर्यवान व्यापारी रहते थे, जिनका नाम था धन्ना सेठ। उनके पास इतनी अधिक मात्रा में धन इकट्ठा हो गया था कि उन्होंने निश्चय लिया कि वे

 
 
 
डायन का आशीर्वाद

By Sia Mishra आज से कई वर्षों पहले, सात समुंदर पार, एक पर्वत-श्रृंख्ला के उस पार, एक छोटी नदी के किनारे एक छोटा-सा प्रदेश था। वहाँ के राजा बहुत दयालु थे और अपनी प्रजा से बहुत लगाव रखते थे। बस वे एक ही

 
 
 
दहेज

By Sia Mishra  गर्मी  का मौसम, शरीर को जला देने वाली कड़ाके की धूप, ऐसा लगता था किसी से भयंकर बदला लेना चाहती है। तिलतिलाती धूप में पेड़ भी थोड़ी सी छाया प्रदान करते हुए संकोच कर रहे थे। वैसे इस मौसम ने

 
 
 

Comments

Rated 0 out of 5 stars.
No ratings yet

Add a rating
bottom of page