By Divya Viswanath
ಧುಮು ಧುಮುಕಿ ಕಾಲುವೆಯಿಂದ ಝರಿಯು ಭರನೆ
ಧುಮು ಧುಮುಕಿ,
ಸರ ಸರನೆ ಹರಿದು ಕೂಡಿತು ನದಿತೀರವನು
ಲವಲವಿಕೆಯಿಂದ ಪುಟಿದೆದ್ದು ಬೆಣಚು ಕಲ್ಲುಗಳ ಜೊತೆ
ಆಟವಾಡಿ,ಸಾಗರವ ಸೇರಿಕೊಂಡಿತು.
ಜಿಗಿಜಿಗಿದು ಚಿಗರೆ ನೋಡು,ಜಿಗಿಜಿಗಿದು,
ಹಸಿರಿನ ಒಡಲಮೇಲೆ ಮಲಗಿರುವ ಜಿಂಕೆಯ ಮಡಿಲ ಸೇರಿತು ಜಿಗಿಜಿಗಿದು,
ಪಟಪಟನೆ ರೆಕ್ಕೆ ಬಡಿದು ಪಟಪಟನೆ,
ಮೇಳೈಸುತ ತಾವೇ ಹೆಣೆದ ಗೂಡನು ಸೇರಿದವು,
ಹಕ್ಕಿಗಳು ರೆಕ್ಕೆಯ ಬಡೆಯುತ ಪಟಪಟನೆ.
ಬಲು ಎತ್ತರಕ್ಕೆ ಹಾರುತ,ಕ್ಷಿತಿಜವ ಚುಂಬಿಸುತ
ಮೋಡಗಳ ಪದರಗಳಲ್ಲಿ ಮಾಯವಾದವು ಬಾನಾಡಿಗಳು.
ಗಾಳಿಯ ವೇಗದಲ್ಲಿ ಸಂಚರಿಸಿ,
ಚಂದ್ರನ ಬೆಳಕನು ಸವಿಯುತ
ಚುಕ್ಕಿಗಳಾಗಿ ಹೋದವು ಕ್ಷಣದಲಿ.
ವಜ್ರದ ಹೊಳಪಿನ ಕಣ್ಣು,ಹೊನ್ನಿನ ಮೈ ಬಣ್ಣ
ಹೊತ್ತ ನಿಶಾಚರ ಪರಭಕ್ಷರು ಆಹಾರವ ಅರಸುತ,
ಕಗ್ಗತ್ತಲಿಗೆ ಸವಾಲಾಗಿ ಹೊರಟವು.
ನೇಸರನು ತನ್ನ ಹೊನ್ನ ಬಿಂದಿಗೆಯಿಂದ,
ಕೆಂಪು ರಂಗನು ಸಿಂಚನ ಮಾಡಿ ಮುಳುಗಿ ಹೋದನು.
ಅಲ್ಲೇ ಇಣಿಕಿನೋಡುತ್ತಿದ್ದ ಚಂದ್ರನು,
ಮರೆಯಿಂದ ಹೊರಹೊಮ್ಮಿ,
ಇನ್ನು ತನ್ನದೇ ರಾಜ್ಯವೆಂದು ಬೀಗಿದನು.
By Divya Viswanath
Comments